ಆದಾಯದ ಎಷ್ಟು ಭಾಗ ಉಳಿತಾಯ ಮಾಡಬೇಕು ಮತ್ತು ಅದನ್ನು ಯಾವ ವಿಮೆಯಲ್ಲಿ ತೊಡಗಿಸಬೇಕು? ಡಾ ಬಾಲಾಜಿ ರಾವ್ ವಿವರಿಸುತ್ತಾರೆ
ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿರುವ ನಮಗೆ ಕೇವಲ ಎರಡು ವಿಮೆಗಳು ಮಾತ್ರ ಉಪಯೋಗಕಾರಿ ಎನ್ನುವ ಡಾ ರಾವ್ ಅವರು ಅವುಗಳಲ್ಲಿ ಮೊದಲನೆಯದ್ದು ಟರ್ಮ್ ಇನ್ಶೂರನ್ಸ್ ಎನ್ನುತ್ತಾರೆ.
ಆದಾಯ, ಉಳಿತಾಯ, ವಿಮೆ, ನೂರೆಂಟು ಕಂಪನಿಗಳು ಮೊದಲಾದವುಗಳ ಬಗ್ಗೆ ನಾವು ಪ್ರತಿದಿನ ಕೇಳಿಸಿಕೊಳ್ಳುತ್ತೇವೆ. ಆದರೆ ಸೂಕ್ತವಾದ ಉಳಿತಾಯ ಹೇಗೆ, ನಮಗೆ ಬರುವ ಆದಾಯದಲ್ಲಿ ಎಷ್ಟು ಶೇಕಡಾವಾರು ಭಾಗವನ್ನು ಉಳಿತಾಯದಲ್ಲಿ ತೊಡಗಿಸಬೇಕು, ಯಾವ ಇನ್ಶೂರನ್ಸ್ ಎಲ್ಲದಕ್ಕಿಂತ ಉತ್ತಮ ಮೊದಲಾದ ವಿಷಯಗಳಲ್ಲಿ ನಾವು ಸ್ವಂತ ಬುದ್ಧಿ ಮತ್ತು ತಿಳುವಳಿಕೆ ಉಪಯೋಗಿಸದೆ ಬೇರೆಯವರಯ ಹೇಳಿದ್ದನ್ನು, ಅವರು ತೆಗೆದುಕೊಂಡಿರುವಂಥ ವಿಮಾ ಪಾಲಿಸಿಯನ್ನು ತೆಗೆದುಕೊಂಡು ಅಕ್ಷರಶಃ ಕುರುಡು ಅನುಕರಣೆ ಮಾಡುತ್ತೇವೆ. ಅದು ದೊಡ್ಡ ತಪ್ಪು ಮತ್ತು ಉಳಿತಾಯ ಹಾಗೂ ಹೂಡಿಕೆಯ ವಿಷಯದಲ್ಲಿ ನಮ್ಮ ಸ್ವಂತ ಬುದ್ಧಿಯನ್ನು ಉಪಯೋಗಿಸಬೇಕು ಅಂತ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಹೇಳುತ್ತಾರೆ.
ಹೂಡಿಕೆ ಕುರಿತ ಟಿವಿ9 ಕನ್ನಡ ಡಿಜಿಟಲ್ ಆರಂಭಿಸಿರುವ ಒಂದು ಹೊಸ, ಪ್ರಯೋಜನಕಾರಿ ಮತ್ತು ಅತ್ಯಂತ ಮಾಹಿತಿಯುಕ್ತ ಹೂಡಿಕೆ ಮಂತ್ರ ಕಾರ್ಯಕ್ರಮದಲ್ಲಿ ಡಾ ರಾವ್ ಅವರು ಪ್ರತಿದಿನ ವಿಷಯಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳನ್ನು ಒಂದೊಂದಾಗಿ ವಿವರಿಸುತ್ತಾ ಹೋಗುತ್ತಾರೆ. ಹೂಡಿಕೆ ವಿಷಯಕ್ಕೆ ಬಂದರೆ ಬೇರೆಯವರು ಹೇಳಿದಂತೆ ಕೇಳುವುದು, ಅವರು ಮಾಡಿದ್ದನ್ನು ಮಾಡುವುದು ಬೇಡವೇ ಬೇಡ ಎನ್ನುತ್ತಾರೆ ಡಾ ರಾವ್. ನಮ್ಮ ಅರೆ ತಿಳುವಳಿಕೆ, ಅರ್ಧ ತಿಳುವಳಿಕೆ ಅಥವಾ ತಿಳುವಳಿಕೆಯೇ ಇಲ್ಲದರಿರುವುದು ಬೇರೆಯವರಿಗೆ ಪ್ರಯೋಜನವಾಗುತ್ತದೆ ಎಂದು ಅವರು ಹೇಳುತ್ತಾರೆ.
ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿರುವ ನಮಗೆ ಕೇವಲ ಎರಡು ವಿಮೆಗಳು ಮಾತ್ರ ಉಪಯೋಗಕಾರಿ ಎನ್ನುವ ಡಾ ರಾವ್ ಅವರು ಅವುಗಳಲ್ಲಿ ಮೊದಲನೆಯದ್ದು ಟರ್ಮ್ ಇನ್ಶೂರನ್ಸ್ ಎನ್ನುತ್ತಾರೆ. ಹೂಡಿಕೆ ಅಥವಾ ವಿಮೆ ಎಷ್ಟು ಮೊತ್ತಕ್ಕೆ ಮಾಡಿಸಬೇಕು ಅನ್ನೋದಕ್ಕೆ ಅವರು ಒಂದು ಸರಳ ಸೂತ್ರವನ್ನು ಅವರು ತಿಳಿಸುತ್ತಾರೆ. ನಮ್ಮ ಸಂಬಳ (ಆದಾಯ) ವನ್ನು 12 ರಿಂದ ಗುಣಿಸಿ ಅದನ್ನು ಪ್ರಸ್ತುತವಾಗಿ ಬ್ಯಾಂಕ್ಗಳು ನೀಡುತ್ತಿರುವ ಬಡ್ಡಿ ದರದಿಂದ ಭಾಗಿಸಿದಾಗ ಸಿಗುವ ಮೊತ್ತ ನಮ್ಮ ವಿಮೆಯ ಮೊತ್ತವಾಗಿರಬೇಕು ಎಂದು ಡಾ ರಾವ್ ಹೇಳುತ್ತಾರೆ.
ಟರ್ಮ್ ಇನ್ಶೂರನ್ಸ್ ಅನ್ನು ಚಿಕ್ಕ ವಯಸ್ಸಿನಲ್ಲೇ ತೆಗೆದುಕೊಳ್ಳಬೇಕು, ವಯಸ್ಸು ಜಾಸ್ತಿಯಾದರೆ ಪ್ರೀಮಿಯಂ ಮೊತ್ತವೂ ಹೆಚ್ಚಾಗುತ್ತದೆ ಎಂದು ಬಾಲಾಜಿ ರಾವ್ ಹೇಳುತ್ತಾರೆ. 25 ರಿಂದ 40 ರರೆಗಿನ ವಯಸ್ಸು ಟರ್ಮ್ ಇನ್ಶೂರನ್ಸ್ ತೆಗೆದುಕೊಳ್ಳಲು ಐಡಿಯಲ್ ಅಂತ ಅವರು ಸಲಹೆ ನೀಡುತ್ತಾರೆ.
ಹಾಗೆಯೇ, ಇನ್ಶೂರನ್ಸ್ ಫಾರ್ಮ್ ತುಂಬುವಾಗ ಸುಳ್ಳು ಮಾಹಿತಿ ನೀಡಕೂಡದು. ನಾವು ನೀಡಿದ ಮಾಹಿತಿಯಲ್ಲಿ ತಪ್ಪು ಕಂಡುಬಂದರೆ ತೊಂದರೆಯಾಗುತ್ತದೆ, ವಿಮಾ ಕಂಪನಿಯು ಹಣ ಮರಳಿಸದಂಥ ಸನ್ನಿವೇಶ ಉಂಟಾಗಬಹುದು ಎಂದು ಡಾ ರಾವ್ ಎಚ್ಚರಿಸುತ್ತಾರೆ.
ಇದನ್ನೂ ಓದಿ: Viral Video: ಪ್ಯಾರಾಗ್ಲೈಡಿಂಗ್ ಮಾಡಿದ ಶ್ವಾನ; ನೆಟ್ಟಿಗರ ಮನಗೆದ್ದಿರುವ ಅಪರೂಪದ ವಿಡಿಯೊ ಇಲ್ಲಿದೆ