Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
IPL 2025 DC vs RCB: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 162 ರನ್ ಕಲೆಹಾಕಿತು. ಈ ಗುರಿಯನ್ನು ಆರ್ಸಿಬಿ ತಂಡ 18.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ 6 ವಿಕೆಟ್ಗಳ ಜಯ ಸಾಧಿಸಿದೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಕೃನಾಲ್ ಪಾಂಡ್ಯ (Krunal Pandya). ಬೌಲಿಂಗ್ನಲ್ಲಿ 4 ಓವರ್ಗಳಲ್ಲಿ 28 ರನ್ ನೀಡಿ 1 ವಿಕೆಟ್ ಕಬಳಿಸಿ ಮಿಂಚಿದ್ದ ಕೃನಾಲ್ ಬ್ಯಾಟಿಂಗ್ನಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದರು.
ಆರ್ಸಿಬಿ ತಂಡವು 26 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕ್ರೀಸ್ಗೆ ಆಗಮಿಸಿದ ಕೃನಾಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಪಾಂಡ್ಯ, ಆ ಬಳಿಕ ಬಿರುಸಿನ ಹೊಡೆತಗಳೊಂದಿಗೆ ಗಮನ ಸೆಳೆದರು. ಈ ಮೂಲಕ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅರ್ಧಶತಕದ ಬೆನ್ನಲ್ಲೇ ಹೊಡಿಬಡಿ ಆಟಕ್ಕೆ ಮುಂದಾದ ಕೃನಾಲ್ ಪಾಂಡ್ಯ 47 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 73 ರನ್ ಬಾರಿಸಿದರು. ಈ ಮೂಲಕ ಆರ್ಸಿಬಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ವಿಶೇಷ ಎಂದರೆ ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬಾರಿಸಿದ್ದು ಐಪಿಎಲ್ನ 2ನೇ ಅರ್ಧಶತಕ. ಕೃನಾಲ್ ಪಾಂಡ್ಯ 2016 ರಿಂದ ಐಪಿಎಲ್ ಆಡುತ್ತಿದ್ದಾರೆ. ಇದರ ನಡುವೆ 115 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ಈ ವೇಳೆ ಅರ್ಧಶತಕ ಬಾರಿಸಿದ್ದು ಕೇವಲ ಒಮ್ಮೆ ಮಾತ್ರ.
2016 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 86 ರನ್ ಬಾರಿಸಿದ್ದು ಅವರ ಶ್ರೇಷ್ಠ ಪ್ರದರ್ಶನ. ಇದಾದ ಬಳಿಕ ಒಮ್ಮೆಯೂ ಹಾಫ್ ಸೆಂಚುರಿ ಸಿಡಿಸಲು ಸಾಧ್ಯವಾಗಿರಲಿಲ್ಲ. ಇದೀಗ 9 ವರ್ಷಗಳ ಬಳಿಕ ಮತ್ತೊಮ್ಮೆ ಐಪಿಎಲ್ನಲ್ಲಿ ಅರ್ಧಶತಕದ ಗಡಿದಾಟಿದ್ದಾರೆ. ಈ ಅರ್ಧಶತಕದೊಂದಿಗೆ ಆರ್ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 162 ರನ್ ಕಲೆಹಾಕಿತು. ಈ ಗುರಿಯನ್ನು ಆರ್ಸಿಬಿ ತಂಡ 18.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.