IPL 2025: ಅನುಭವಿ ಶಮಿಯನ್ನು ಹಿಗ್ಗಾಮುಗ್ಗಾ ದಂಡಿಸಿದ ಪ್ರಿಯಾಂಶ್; ವಿಡಿಯೋ
Priyansh Arya's Explosive Batting: ಐಪಿಎಲ್ 2025ರ 27ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ ಮೂರು ಓವರ್‌ಗಳಲ್ಲಿ 53 ರನ್ ಗಳಿಸಿ ತಮ್ಮ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮೊಹಮ್ಮದ್ ಶಮಿ ಮತ್ತು ಪ್ಯಾಟ್ ಕಮಿನ್ಸ್‌ರಂತಹ ಅನುಭವಿ ಬೌಲರ್‌ಗಳನ್ನು ಸುಲಭವಾಗಿ ದಂಡಿಸಿದರು.
ಐಪಿಎಲ್ 2025 ರ 27ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಪಂಜಾಬ್ ತಂಡದ ಯುವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಸ್ಫೋಟಕ ಬ್ಯಾಟಿಂಗ್ ಮಾಡಿ ಕೇವಲ ಮೂರು ಓವರ್‌ಗಳಲ್ಲಿ ತಂಡವನ್ನು 50 ರ ಗಡಿ ದಾಟಿಸಿದರು. ಈ ವೇಳೆ ಪ್ರಿಯಾಂಶ್ ಮೊಹಮ್ಮದ್ ಶಮಿ ಮತ್ತು ಪ್ಯಾಟ್ ಕಮಿನ್ಸ್‌ರಂತಹ ಅನುಭವಿಗಳನ್ನೇ ಸರಿಯಾಗಿ ದಂಡಿಸಿದರು.
ಸಿಎಸ್‌ಕೆ ವಿರುದ್ಧದ ಕಳೆದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಪ್ರಿಯಾಂಶ್ ಆರ್ಯ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಮೊದಲ ಓವರ್‌ನಲ್ಲಿ ಶಮಿಗೆ ಬೌಂಡರಿಗಳ ಮಳೆಗರೆದ ಪ್ರಿಯಾಂಶ್, ಇದಾದ ನಂತರ ಪ್ಯಾಟ್ ಕಮ್ಮಿನ್ಸ್ ಅವರ ಓವರ್‌ನಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸುವ ಮೂಲಕ ಸಂಚಲನ ಮೂಡಿಸಿದರು. ಮೂರನೇ ಓವರ್‌ನಲ್ಲೂ ಮೊಹಮ್ಮದ್ ಶಮಿಯನ್ನು ಗುರಿಯಾಗಿಸಿಕೊಂಡ ಅವರು ಮೂರನೇ ಓವರ್‌ನ ಮೊದಲ ಮತ್ತು ಎರಡನೇ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರೆ, ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಆರ್ಯ ಅವರ ಸ್ಫೋಟಕ ಬ್ಯಾಟಿಂಗ್ ಆಧಾರದ ಮೇಲೆ ಪಂಜಾಬ್ ಮೊದಲ ಓವರ್‌ನಲ್ಲಿ 14 ರನ್ ಗಳಿಸಿದರೆ, ಎರಡನೇ ಓವರ್‌ನಲ್ಲಿ 16 ರನ್ ಮತ್ತು ಮೂರನೇ ಓವರ್‌ನಲ್ಲಿ 23 ರನ್ ಸೇರಿಸಿತು. ಈ ಮೂಲಕ ಪಂಜಾಬ್ ಕೇವಲ 3 ಓವರ್‌ಗಳಲ್ಲಿ 53 ರನ್ ಗಳಿಸಿತು. 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ 2.5 ಓವರ್‌ಗಳಲ್ಲಿ 50 ರನ್ ಗಳಿಸಿದ್ದು ಇಲ್ಲಿಯವರೆಗಿನ ಅತ್ಯಧಿಕ ಸ್ಕೋರ್ ಆಗಿತ್ತು.