ಅದರ ಬಗ್ಗೆ ಚಿಂತಿಸಬೇಡ… ಶ್ರೇಯಸ್ ಅಯ್ಯರ್ ಮಾತಿನಿಂದ ಬದಲಾದ ಯುಜ್ವೇಂದ್ರ ಚಹಲ್
Yuzvendra Chahal: ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿರುವ ಯುಜ್ವೇಂದ್ರ ಚಹಲ್ ಮೊದಲ 5 ಪಂದ್ಯಗಳಲ್ಲಿ ಕಬಳಿಸಿದ್ದು ಕೇವಲ 2 ವಿಕೆಟ್ ಮಾತ್ರ. ಆದರೆ ಕೊನೆಯ ಎರಡು ಮ್ಯಾಚ್ಗಳ ಮೂಲಕ ಚಹಲ್ ಲಯಕ್ಕೆ ಮರಳಿದ್ದಾರೆ. ಅಲ್ಲದೆ ಒಟ್ಟು 6 ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ.
IPL 2025: ಈ ಬಾರಿಯ ಐಪಿಎಲ್ ಮೂಲಕ ಪಂಜಾಬ್ ಕಿಂಗ್ಸ್ (Punjab Kings) ಪರ ಹೊಸ ಇನಿಂಗ್ಸ್ ಆರಂಭಿಸಿರುವ ಯುಜ್ವೇಂದ್ರ ಚಹಲ್ (Yuzvendra Chahal) ಮೊದಲ 4 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 3 ಓವರ್ಗಳಲ್ಲಿ 34 ರನ್ ನೀಡಿದ್ದ ಚಹಲ್ ಒಂದೇ ಒಂದು ವಿಕೆಟ್ ಕಬಳಿಸಿರಲಿಲ್ಲ.
ಆ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ 36 ರನ್ ನೀಡಿ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದರು. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ 3 ಓವರ್ಗಳಲ್ಲಿ ಚಹಲ್ ನೀಡಿದ್ದು 32 ರನ್ಗಳು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ.
ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚಹಲ್ಗೆ ಕೇವಲ ಒಂದು ಓವರ್ ಮಾತ್ರ ನೀಡಲಾಗಿತ್ತು. ಈ ವೇಳೆ 9 ರನ್ ನೀಡಿದ್ದರೂ ವಿಕೆಟ್ ಕಬಳಿಸಲು ಸಾಧ್ಯವಾಗಿರಲಿಲ್ಲ. ಇನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ 56 ರನ್ ನೀಡಿ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದರು.
ಅಂದರೆ ಮೊದಲ 5 ಪಂದ್ಯಗಳಲ್ಲಿ ಯುಜ್ವೇಂದ್ರ ಚಹಲ್ ಕಬಳಿಸಿದ್ದು ಕೇವಲ 2 ವಿಕೆಟ್ ಮಾತ್ರ. ಇದುವೇ ಪಂಜಾಬ್ ಕಿಂಗ್ಸ್ ತಂಡದ ಚಿಂತೆಗೆ ಕಾರಣವಾಗಿತ್ತು.
ಈ ಚಿಂತೆಯನ್ನು ದೂರ ಮಾಡಿದ್ದು ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್. ಚಹಲ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಅಯ್ಯರ್ ಆತ್ಮ ವಿಶ್ವಾಸ ತುಂಬಿಸುವ ಕಾಯಕಕ್ಕೆ ಕೈ ಹಾಕಿದ್ದರು. ಅಲ್ಲದೆ ನೀನೇ ನಮ್ಮ ಮ್ಯಾಚ್ ವಿನ್ನರ್. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಕಾದ ಅಗತ್ಯನೇ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ವಿಕೆಟ್ಗಳನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಹುರಿದುಂಬಿಸಿದರು.
ಅಷ್ಟೇ ಅಲ್ಲದೆ ಇನ್ಮುಂದೆ ರಕ್ಷಣಾತ್ಮಕವಾಗಿ ಬೌಲಿಂಗ್ ಮಾಡುವ ಅಗತ್ಯವಿಲ್ಲ. ಏನೇ ಆದರೂ ನಾನಿದ್ದೀನಿ. ವಿಕೆಟ್ಗಳನ್ನು ಪಡೆಯಲಷ್ಟೇ ಬೌಲಿಂಗ್ ಮಾಡು. ರನ್ ಹೋಗುವುದರ ಬಗ್ಗೆ ಚಿಂತಿಸಬೇಡಿ. ವಿಕೆಟ್ಗಳನ್ನು ಕಬಳಿಸುವತ್ತ ಗಮನ ಹರಿಸಿ. ನಾಯಕನಾಗಿ ನಾನು ಜೊತೆಗಿರುತ್ತೀನಿ ಎಂದು ದೈರ್ಯ ತುಂಬಿದರು.
ಶ್ರೇಯಸ್ ಅಯ್ಯರ್ ಅವರ ಈ ಬೆಂಬಲದ ಬೆನ್ನಲ್ಲೇ ಯುಜ್ವೇಂದ್ರ ಚಹಲ್ ಮತ್ತೆ ಲಯಕ್ಕೆ ಮರಳಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ಚಹಲ್ 28 ರನ್ ನೀಡಿ 4 ವಿಕೆಟ್ ಕಬಳಿಸಿ ಗೆಲುವು ತಂದುಕೊಟ್ಟರು. ಇದೀಗ ಆರ್ಸಿಬಿ ವಿರುದ್ಧ 3 ಓವರ್ಗಳಲ್ಲಿ ನೀಡಿದ್ದು ಕೇವಲ 13 ರನ್ಗಳು ಮಾತ್ರ. ಅಲ್ಲದೆ 2 ವಿಕೆಟ್ ಕಬಳಿಸಿ ಕೂಡ ಮಿಂಚಿದ್ದಾರೆ.
ಒಟ್ಟಿನಲ್ಲಿ ಶ್ರೇಯಸ್ ಅಯ್ಯರ್ ತುಂಬಿದ ಆತ್ಮ ವಿಶ್ವಾಸದಿಂದ ಯುಜ್ವೇಂದ್ರ ಚಹಲ್ ಮತ್ತೆ ಟ್ರಾಕ್ಗೆ ಮರಳಿದ್ದಾರೆ. ಇದುವೇ ಈಗ ಎದುರಾಳಿ ತಂಡಗಳ ಚಿಂತೆಯನ್ನು ಹೆಚ್ಚಿಸಿದೆ.