SRH vs PBKS: ಗೆರೆ ದಾಟಿದ್ದೇ ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ..!
IPL 2025 SRH vs PBKS: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 141 ರನ್ ಬಾರಿಸಿದರು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು 18.3 ಓವರ್ಗಳಲ್ಲಿ 247 ರನ್ ಬಾರಿಸಿ 8 ವಿಕೆಟ್ಗಳ ಜಯ ಸಾಧಿಸಿದೆ.
ಐಪಿಎಲ್ನ (IPL 2025) 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಸನ್ರೈಸರ್ಸ್ ಹೈದರಾಬಾದ್ (SRH) ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ಎಡಗೈ ದಾಂಡಿಗ ಅಭಿಷೇಕ್ ಶರ್ಮಾ. 246 ರನ್ಗಳ ಗುರಿ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ಒದಗಿಸಿದ್ದರು. ಇದಾಗ್ಯೂ 4ನೇ ಓವರ್ನಲ್ಲಿ ಅವರು ಕ್ಯಾಚ್ ನೀಡಿದ್ದರು.
ಯಶ್ ಠಾಕೂರ್ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ್ದರು. ಈ ಕ್ಯಾಚ್ ಹಿಡಿದು ಶಶಾಂಕ್ ಸಿಂಗ್ ಸಂಭ್ರಮಿಸುತ್ತಾ ಆಗಮಿಸಿದರೆ, ಇತ್ತ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿತ್ತು. ಆದರೆ ಪಂಜಾಬ್ ಕಿಂಗ್ಸ್ ತಂಡದ ಈ ಸಂಭ್ರಮ ಕೆಲ ಕ್ಷಣಗಳಿಗೆ ಮಾತ್ರ ಸೀಮಿತವಾಗಿತ್ತು.
ಏಕೆಂದರೆ ಔಟಾಗಿ ಹೊರ ನಡೆಯುತ್ತಿದ್ದ ಅಭಿಷೇಕ್ ಶರ್ಮಾಗೆ ಅಂಪೈರ್ ನಿಲ್ಲುವಂತೆ ಸೂಚನೆ ನೀಡಿದರು. ಅಲ್ಲದೆ ತಕ್ಷಣವೇ ನೋ ಬಾಲ್ ಘೋಷಿಸಿದರು. ರಿಪ್ಲೇನಲ್ಲಿ ಯಶ್ ಠಾಕೂರ್ ಗೆರೆ ದಾಟಿರುವುದು ಸ್ಪಷ್ಟವಾಗಿತ್ತು. ಅದರಂತೆ 28 ರನ್ಗಳಿಸಿ ಔಟಾಗಿ ನಿರ್ಗಮಿಸಬೇಕಿದ್ದ ಅಭಿಷೇಕ್ ಶರ್ಮಾ ಆ ಬಳಿಕ ಅಬ್ಬರಿಸಿದರು.
ಅಲ್ಲದೆ ಕೇವಲ 55 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ ಬರೋಬ್ಬರಿ 141 ರನ್ ಸಿಡಿಸಿದರು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಒಂದು ವೇಳೆ ಪವರ್ಪ್ಲೇನಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಪಡೆದಿದ್ದರೆ, ಪಂಜಾಬ್ ಕಿಂಗ್ಸ್ ತಂಡವು ಆರಂಭಿಕ ಯಶಸ್ಸಿನೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದ್ದರು. ಆದರೆ ಯಶ್ ಠಾಕೂರ್ ಗೆರೆದಾಟಿ ಎಸೆದ ಚೆಂಡು ಪಂಜಾಬ್ ಕಿಂಗ್ಸ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು.