ಗಲಭೆಕೋರ ಕಾರ್ಪೋರೇಟರ್ ಆಗಿರಲಿ ಅಥವಾ ಅವನ ತಾತ, ಮುತ್ತಾತ; ಕಠಿಣ ಕ್ರಮ ಜರುಗಿಸದೆ ಬಿಡುವುದಿಲ್ಲ: ಪ್ರಲ್ಹಾದ್ ಜೋಶಿ

ಗಲಭೆಕೋರ ಕಾರ್ಪೋರೇಟರ್ ಆಗಿರಲಿ ಅಥವಾ ಅವನ ತಾತ, ಮುತ್ತಾತ; ಕಠಿಣ ಕ್ರಮ ಜರುಗಿಸದೆ ಬಿಡುವುದಿಲ್ಲ: ಪ್ರಲ್ಹಾದ್ ಜೋಶಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 18, 2022 | 5:44 PM

ಗಲಭೆ ಸೃಷ್ಟಿಯಾಗಲು ಕಾರಣರಾದವರು ಯಾರು, ಕರೆಕೊಟ್ಟವರು ಯಾರು, ಹೊರಗಿನಿಂದ ಬಂದವರು ಎಷ್ಟು ಜನ, ವಾಟ್ಸ್ಯಾಪ್ ಗ್ರೂಪಿನಲ್ಲಿ ಸಂದೇಶ ಕಳಿಸಿದವರು ಯಾರು ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೆಲ್ಲ ಭಾಗಿಯಾಗಿದ್ದಾರೆ ಅಂತ ಗೊತ್ತಾದ ಬಳಿಕ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜೋಶಿಯವರು ಹೇಳಿದರು.

ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಗಲಭೆ ಪ್ರದೇಶಕ್ಕೆ ರವಿವಾರ ಕೇಂದ್ರ ಸಂಸದೀಯ ವ್ಯವಹಾರಗಳು (Parliamentary affairs) ಹಾಗೂ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ಹನುಮಾನ್ ದೇವಸ್ಥಾನ, ಆ ಸ್ಥಳದಲ್ಲಿರುವ ಮನೆಗಳು ಮತ್ತು ಪೊಲೀಸರ ಮೇಲೆ ನಡೆಸಿದ ಮತಾಂಧರ (fanatics)ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಯಾರನ್ನೂ ಬಿಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಥಳಿಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು ಒಂದು ಗ್ರಾಫಿಕ್ ಎನಿಮೇಶನನ್ನು ನೆಪವಾಗಿಟ್ಟುಕೊಂಡು ದಾಂಧಲೆ ನಡೆಸಿದ್ದಾರೆ. ರಾತ್ರೋರಾತ್ರಿ ಸಾವಿರಾರು ಜನ ಅಲ್ಲಿ ಸೇರಿಬಿಟ್ಟಿದ್ದಾರೆ. ನಾನು, ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಶಾಸಕ ಜಗದೀಶ್ ಶೆಟ್ಟರ್ ಸೇರಿ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಅಮೂಲಾಗ್ರ ತನಿಖೆ ನಡೆಯಬೇಕೆಂದು ಪೊಲೀಸರಿಗೆ ಹೇಳಿದ್ದೇವೆ. ಇದರಲ್ಲಿ ಕಾರ್ಪೋರೇಟರ್ ಭಾಗಿಯಾಗಿರಲಿ ಅವನ ತಾತ ಮುತ್ತಾತ ಭಾಗಿಯಾಗಿರಲಿ, ಸ್ಪೇರ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಘಟನೆಯಲ್ಲಿ ಪೊಲೀಸರಿಗೆ ಗಾಯಗಳಾಗಿವೆ. ಅದರೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದ ಕಾರಣ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ. ಗಲಭೆ ಸೃಷ್ಟಿಯಾಗಲು ಕಾರಣರಾದವರು ಯಾರು, ಕರೆಕೊಟ್ಟವರು ಯಾರು, ಹೊರಗಿನಿಂದ ಬಂದವರು ಎಷ್ಟು ಜನ, ವಾಟ್ಸ್ಯಾಪ್ ಗ್ರೂಪಿನಲ್ಲಿ ಸಂದೇಶ ಕಳಿಸಿದವರು ಯಾರು ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೆಲ್ಲ ಭಾಗಿಯಾಗಿದ್ದಾರೆ ಅಂತ ಗೊತ್ತಾದ ಬಳಿಕ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜೋಶಿಯವರು ಹೇಳಿದರು.

ಪಿಎಫ್ಐ ಮತ್ತು ಎಸ್ ಡಿ ಪಿ ಐ ಸಂಘಟನೆಗಳ ಬಹಿಷ್ಕರಿಸುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಅವುಗಳನ್ನು ಬ್ಯಾನ್ ಮಾಡಲು ಒಂದು ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ಅದೀಗ ಜಾರಿಯಲ್ಲಿದೆ ಅಂತ ಪ್ರಲ್ಹಾದ್ ಜೋಶಿಯವರು ಹೇಳುವಾಗ ಅಲ್ಲಿ ನೂಕು ನುಗ್ಗಲು ಶುರುವಾಗಿದ್ದರಿಂದ ಅವರ ಮಾತು ಪೂರ್ತಿಯಾಗಿ ಕೇಳಿಸುವುದಿಲ್ಲ.

ಇದನ್ನೂ ಓದಿ:  ವಿವಾದಿತ ಪೋಸ್ಟ್​ನಿಂದ ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರ; 100ಕ್ಕೂ ಹೆಚ್ಚು ಜನ ವಶ, ಕೋರ್ಟ್‌ಗೆ ಹಾಜರುಪಡಿಸಲಿರುವ ಪೊಲೀಸರು