ಭುವನ ಸುಂದರಿ ಹರ್ನಾಜ್ ಸಂಧು ಬುದ್ಧಿಮತ್ತೆ ಮತ್ತು ಪ್ರಮುಖ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರ ಜ್ಯೂರಿಯನ್ನು ಪ್ರಭಾವಕ್ಕೊಳಪಡಿಸಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 14, 2021 | 8:31 PM

ಭುವನ ಸುಂದರಿ ಮತ್ತು ವಿಶ್ವ ಸುಂದರಿ ಸ್ಪರ್ಧೆಗಳಲ್ಲಿ ಕೇವಲ ಮಹಿಳೆಯರ ಸೌಂದರ್ಯ ಮತ್ತು ಅಂಗಸೌಷ್ಠವ ಮಾತ್ರ ಮಾನದಂಡಗಳಾಗುವುದಿಲ್ಲ. ಸ್ಫರ್ಧೆಯಲ್ಲಿ ಪಾಲ್ಗೊಂಡವರ ಬುದ್ಧಿಮತ್ತೆಯ ಪರೀಕ್ಷೆಯೂ ನಡೆಯುತ್ತದೆ.

ಇಸ್ರೇಲ್​​​ನಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಸರಿಯಾಗಿ 21 ವರ್ಷಗಳ ನಂತರ ಭಾರತದ ಕೀರ್ತಿಪತಾಕೆ ಹಾರಿಸಿದ ಹರ್ನಾಜ್ ಸಂಧು ನಾವೆಲ್ಲರೂ ಹೆಮ್ಮೆ ಪಡುವ ಮತ್ತು ಸಂಭ್ರಮಿಸುವ ಹಾಗೆ ಮಾಡಿದ್ದಾರೆ. ಚಂಡೀಗಡ್ನ ಸ್ನಾತ್ತಕೋತ್ತರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಪಂಜಾಬಿ ಸಿನಿಮಾ ನಟಿಯಾಗಿರುವ ಹರ್ನಾಜ್ 2000 ರಲ್ಲಿ ಲಾರಾ ದತ್ತಾ ಅವರು ಭುವನ ಸುಂದರಿ ಕಿರೀಟ ಧರಿಸಿದ ನಂತರ ಗೌರವಕ್ಕೆ ಪಾತ್ರರಾಗಿರುವ ಕೇವಲ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ. ಲಾರಾ ಮತ್ತು ಹರ್ನಾಜ್ ಕ್ಕಿಂತ ಮೊದಲು 1994ರಲ್ಲಿ ಸುಶ್ಮಿತಾ ಸೇನ್ ಜಾಗತಿಕ ಸುಂದರಿ ಎನಿಸಿಕೊಂಡಿದ್ದರು.

ಭುವನ ಸುಂದರಿ ಮತ್ತು ವಿಶ್ವ ಸುಂದರಿ ಸ್ಪರ್ಧೆಗಳಲ್ಲಿ ಕೇವಲ ಮಹಿಳೆಯರ ಸೌಂದರ್ಯ ಮತ್ತು ಅಂಗಸೌಷ್ಠವ ಮಾತ್ರ ಮಾನದಂಡಗಳಾಗುವುದಿಲ್ಲ. ಸ್ಫರ್ಧೆಯಲ್ಲಿ ಪಾಲ್ಗೊಂಡವರ ಬುದ್ಧಿಮತ್ತೆಯ ಪರೀಕ್ಷೆಯೂ ನಡೆಯುತ್ತದೆ. ಹರ್ನಾಜ್ ಅವರಿಗೆ ಸ್ಪರ್ಧೆಯಲ್ಲಿ ಕೇಳಿದ ಅಂತಿಮ ಪ್ರಶ್ನೆಗೆ ಅವರು ನೀಡಿದ ಉತ್ತರವೇ ಪ್ರಶಸ್ತಿ ದಕ್ಕುವಂತೆ ಮಾಡಿತು.

ತೀವ್ರ ಸ್ವರೂಪದ ಸ್ಪರ್ಧಾತ್ಮಕ ಇಂದಿನ ಯುಗದಲ್ಲಿ ಯುವತಿಯರು ಹೇಗೆ ಒತ್ತಡವನ್ನು ನಿಭಾಯಿಸಬೇಕು ಎಂದು ಕೇಳಿದ ಪ್ರಶ್ನೆಗೆ ಹರ್ನಾಜ್, ‘ಇವತ್ತಿನ ಯುವತಿಯರು ಎದುರಿಸುತ್ತಿರುವ ಸಮಸ್ಯೆಯೆಂದರೆ, ತಮ್ಮ ಸಾಮರ್ಥ್ಯದ ಮೇಲೆ ಅವರಿಗೆ ನಂಬಿಕೆ ಇಲ್ಲದಿರುವುದು. ನೀವು ಬೇರೆಯವರಿಗಿಂತ ಭಿನ್ನವಾಗಿರುವುದೇ ನಿಮ್ಮಲ್ಲಿರುವ ಸೌಂದರ್ಯ. ಬೇರೆಯವರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದನ್ನು ನಿಲ್ಲಿಸಿಬಿಡಿ. ನಮ್ಮ ಸುತ್ತಮುತ್ತ ಪ್ರಮುಖವಾದ ಅನೇಕ ವಿಷಯಗಳಿವೆ, ಅವುಗಳ ಕಡೆ ನಾವು ಗಮನ ಹರಿಸೋಣ’ ಎಂದು ಹರ್ನಾಜ್ ಉತ್ತರಿಸಿದ್ದರು.

‘ನೀವು ಅರ್ಥಮಾಡಿಕೊಳ್ಳಬೇಕಿರುವುದು ಇದನ್ನೇ. ಮೈ ಕೊಡವಿಕೊಂಡು ಎದ್ದೇಳಿ, ನಿಮ್ಮ ಬದುಕಿಗೆ ನೀವೇ ನಾಯಕರು, ನಿಮಗಾಗಿ ಬೇರೆ ಯಾರೂ ಹೋರಾಡುವುದಿಲ್ಲ, ನಿಮ್ಮ ಹೋರಾಟ ನೀವೇ ಮಾಡಬೇಕು. ನನಗೆ ನನ್ನ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆಯಿತ್ತು, ಆ ಕಾರಣಕ್ಕಾಗೇ ಇವತ್ತು ನಾನಿಲ್ಲಿ ನಿಂತಿದ್ದೇನೆ,’ ಎಂದು ಹರ್ನಾಜ್ ಹೇಳಿದರು.

ಜಾಗತಿಕ ತಾಪಮಾನದ ಬಗ್ಗೆ ಕೇಳಿದ ಪ್ರಶ್ನೆಗೂ ಹರ್ನಾಜ್ ನೀಡಿದ ಉತ್ತರ ತೀರ್ಪುಗಾರರ ಗಮನ ಸೆಳೆಯಿತು. ‘ಈಗ ಕಾರ್ಯೋನ್ಮುಖರಾಗುವ ಸಮಯ, ಬರೀ ಮಾತಿನಲ್ಲಿ ಹೊತ್ತು ಕಳೆಯುವುದಲ್ಲ. ಆಗುವ ಹಾನಿಯನ್ನು ದುರಸ್ತಿ ಮಾಡುತ್ತಾ ಪಶ್ಚಾತ್ತಾಪ ಪಡುವ ಬದಲು ಹಾನಿಯಾಗದ ಹಾಗೆ ತಡೆಯುವುದು ಹಾಗೂ ಸಂರಕ್ಷಿಸುವುದರಲ್ಲಿ ಬುದ್ಧಿವಂತಿಕೆ ಅಡಗಿದೆ,’ ಎಂದು ಅವರು ಉತ್ತರಿಸಿದ್ದರು.

ಇದನ್ನೂ ಓದಿ:   ಪಡ್ಡೆ ಹುಡುಗರ ಹಾರ್ಟ್​ ಬೀಟ್​ ಹೆಚ್ಚಿಸಿದ ಸಮಂತಾ ಹೊಸ ವಿಡಿಯೋ; ಅಭಿಮಾನಿಗಳು ಫಿದಾ

Published on: Dec 14, 2021 08:31 PM