ಸಿಎಂ ಸಿದ್ದರಾಮಯ್ಯ ಸಾರ್ವಜನಿಕವಾಗಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ: ಜಗದೀಶ್ ಶೆಟ್ಟರ್

Updated on: Apr 28, 2025 | 8:07 PM

ಮುಖ್ಯಮಂತ್ರಿಯಿಂದ ಅವಕೃಪೆಗೊಳಗಾದ ಪೊಲೀಸ್ ಅಧಿಕಾರಿಯನ್ನು ಬಲ್ಲೆ, ಅವರೊಬ್ಬ ಒಳ್ಳೆಯ ಅಧಿಕಾರಿ, ಆದರೆ ಸಿದ್ದರಾಮಯ್ಯ ವರ್ತನೆ ಅಧಿಕಾರಿಯ ಚೇತನವನ್ನು ಅಧೀರಗೊಳಿಸಿದೆ, ಒಬ್ಬ ಹಿರಿಯ ಅಧಿಕಾರಿ ಹಾಗೆ ಸಾರ್ವಜನಿಕವಾಗಿ ಅಪಮಾನಕ್ಕೊಳಗಾದರೆ ಅವರ ಕಾರ್ಯಕ್ಷಮತೆ ಮತ್ತು ದಕ್ಷತೆ ಪ್ರಭಾವಕ್ಕೊಳಗಾಗುತ್ತದೆ, ಹಾಗೆ ನೋಡಿದರೆ ಆ ಸ್ಥಳ ಅಡಿಷನಲ್ ಎಸ್​ಪಿ ಕಾರ್ಯವ್ಯಾಪ್ತಿಗೆ ಬರಲ್ಲ, ಪೊಲೀಸ್ ಕಮೀಶನರ್​​ರನ್ನು ಸಿಎಂ ಪ್ರಶ್ನಿಸಬೇಕಿತ್ತು ಎಂದು ಶೆಟ್ಟರ್ ಹೇಳಿದರು.

ದೆಹಲಿ, ಏಪ್ರಿಲ್ 28:  ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ, ಅವರು ಸಾರ್ವಜನಿಕವಾಗಿ ಮಾನಸಿಕ ಸ್ಥಿಮಿತ ಕಳೆದಕೊಂಡು ಒಬ್ಬ ಜವಾಬ್ದಾರಿಯುತ ಪೊಲೀಸ್ ಆಧಿಕಾರಿಯ (responsible police official) ಮೇಲೆ ರೇಗಾಡುವುದು, ಚೀರಾಡುವುದು ಅವರ ಸ್ಥಾನಕ್ಕೆ ಶೋಭೆ ತರೋದಿಲ್ಲ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ದೆಹಲಿಯಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ಬೆಳಗಾವಿಯಲ್ಲಿ ಅವರು ಭಾಷಣ ಮಾಡುವಾಗ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಆ ಸಂದರ್ಭವನ್ನು ಅವರು ಹಿಂದಿನ ಮುಖ್ಯಮಂತ್ರಿ ಜೆಹೆಚ್ ಪಟೇಲ್ ಅವರ ಹಾಗೆ ಸ್ಥಿತಪ್ರಜ್ಞರಾಗಿ ಸ್ವೀಕರಿಸಬೇಕಿತ್ತು, ಅದು ಬಿಟ್ಟು ಒಬ್ಬ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಕಪಾಳ ಮೋಕ್ಷ ಮಾಡಲು ಮುಂದಾಗಿದ್ದು ಸಿಎಂ ಮಾನಸಿಕ ಸಂತುಲನ ಕಳೆದುಕೊಳ್ಳುತ್ತಿರುವುದಕ್ಕೆ ದೊಡ್ಡ ಸಾಕ್ಷಿಯಾಗಿದೆ ಎಂದು ಶೆಟ್ಟರ್ ಹೇಳಿದರು.

ಇದನ್ನೂ ಓದಿ:  ಪಾಕ್ ಕುರಿತ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ಬಿಜೆಪಿ ಆಕ್ರೋಶ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 28, 2025 07:43 PM