‘ಜಯಂತಿ ಅಮ್ಮ ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯಲ್ಲ’; ನಟಿ ಪದ್ಮಜಾ ರಾವ್
‘ಜಯಂತಿ ಅವರು ಶ್ರೀರಂಗಪಟ್ಟಣದವರೆಗೆ ಬಂದು, ಕೇವಲ 5 ಸಾವಿರ ರೂಪಾಯಿ ಸಂಭಾವನೆಗೆ ಒಪ್ಪಿಕೊಂಡು ನಮ್ಮ ಸೀರಿಯಲ್ನಲ್ಲಿ ನಟಿಸಿದ್ದರು’ ಎಂದು ಅಭಿನಯ ಶಾರದೆಯ ದೊಡ್ಡ ಗುಣದ ಬಗ್ಗೆ ಖ್ಯಾತ ನಟಿ ಪದ್ಮಜಾ ರಾವ್ ಅವರು ಮಾತನಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಜಯಂತಿ ಅವರು ಸೋಮವಾರ (ಜು.26) ನಿಧನರಾದರು. ಅವರು ತಮಗೆ ಮಾಡಿದ ಸಹಾಯವನ್ನು ನಟಿ ಪದ್ಮಜಾ ರಾವ್ ಈಗ ಸ್ಮರಿಸಿಕೊಂಡಿದ್ದಾರೆ. ‘15 ವರ್ಷಗಳ ಹಿಂದೆ ನಾನು ‘ಬೆಂಕಿಯಲ್ಲಿ ಅರಳಿದ ಹೂವು’ ಧಾರಾವಾಹಿಯನ್ನು ನಿರ್ದೇಶಿಸಿ, ನಿರ್ಮಿಸಿದ್ದೆ. ಮೊದಲ ಎಪಿಸೋಡ್ಗೆ ದೊಡ್ಡ ಸೆಲೆಬ್ರಿಟಿಯನ್ನು ಕರೆದುಕೊಂಡು ಬರಬೇಕು ಎಂದು ವಾಹಿನಿಯವರು ಹೇಳಿದ್ರು. ಜಯಂತಿ ಯಾರು ಎಂಬುದು ನಮಗೆಲ್ಲ ಗೊತ್ತು. ಆದರೆ ನಾನು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಆಗತಾನೆ ನಾನು ಇಂಡಸ್ಟ್ರಿಗೆ ಬಂದಿದ್ದವಳು. ಏನೋ ಧೈರ್ಯ ಮಾಡಿ ಅವರ ಮನೆಗೆ ಹೋದೆ. ಮನವಿ ಮಾಡಿಕೊಂಡಾಗ ಒಂದೇ ಮಾತಿನಲ್ಲಿ ಒಪ್ಪಿಕೊಂಡರು. ಶ್ರೀರಂಗಪಟ್ಟಣದವರೆಗೆ ಬಂದು, ಕೇವಲ 5 ಸಾವಿರ ರೂಪಾಯಿ ಸಂಭಾವನೆಗೆ ಒಪ್ಪಿಕೊಂಡು ನಮ್ಮ ಸೀರಿಯಲ್ನಲ್ಲಿ ನಟಿಸಿದ್ದರು’ ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ನಟಿ ಪದ್ಮಜಾ ರಾವ್.
ಸೋಮವಾರ (ಜು.26) ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಬನಶಂಕರಿ ಚಿತಾಗಾರದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು. ಜಯಂತಿ ನಿಧನಕ್ಕೆ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ, ಪ್ರಹ್ಲಾದ್ ಜೋಶಿ, ದರ್ಶನ್, ಪುನೀತ್ ರಾಜ್ಕುಮಾರ್ ಸೇರಿದಂತೆ ಅನೇಕ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಇದನ್ನೂ ಓದಿ:
ಜಯಂತಿ ನಿಧನಕ್ಕೆ ಕಂಬನಿ ಮಿಡಿದ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್
ಸಾವಿನಲ್ಲೂ ಸಾರ್ಥಕತೆ ಕಂಡ ಜಯಂತಿ; ಕಣ್ಣುಗಳನ್ನು ದಾನ ಮಾಡಿದ ಹಿರಿಯ ನಟಿ