ಸಂಸದೆ ಸುಮಲತಾ ವಿರುದ್ಧ ದೂರು ದಾಖಲಿಸುವ ಬಗ್ಗೆ ಮಾತಾಡದ ಶಾಸಕ ಸಾರಾ ಮಹೇಶ್ ಜಿಲ್ಲಾಧಿಕಾರಿಗಳ ನಿರ್ಣಯಕ್ಕೆ ಬದ್ಧ ಎಂದರು
ಸುಮಲತಾ ಅವರು ಮಾಡಿದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕನಾದ ತನ್ನನ್ನು ಆಹ್ವಾನಿಸದೆ ಶಿಷ್ಟಾಚಾರದ ಉಲ್ಲಂಘನೆ ಮಾಡಿದ್ದಾರೆ ಎಂದು ಮಹೇಶ್ ಅವರು ಅರೋಪಿಸುತ್ತಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalata Ambareesh) ಮತ್ತು ಜಿಲ್ಲೆಯ ಶಾಸಕರ (MLAs) ನಡುವೆ ತಕರಾರುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಶಾಸಕರಿಗೆ ದೊರೆಯುವ ಅನುದಾನಗಳಿಂದ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು (development works) ಸಂಸದರ ಅನುದಾನ ಬಳಸಿ ತಾನು ಮಾಡುತ್ತಿದ್ದರೂ ಅದರ ಶ್ರೇಯಸ್ಸನ್ನು ಮಂಡ್ಯದ ಶಾಸಕರು ತೆಗೆದುಕೊಳ್ಳುತ್ತಿದ್ದಾರೆ ಎಂದು ಸುಮಲತಾ ಅವರು ಹೇಳಿರುವುದು ಜೆಡಿಎಸ್ ಶಾಸಕ ಸಾರಾ ಮಹೇಶ್ ಮತ್ತು ಡಿಸಿ ತಮ್ಮಣ್ಣ ಅವರಿಗೆ ಸರಿಯೆನ್ನಿಸಿಲ್ಲ. ಇವರ ನಡುವಿನ ಜಗಳದ ಮುಂದುವರಿದ ಭಾಗವಾಗಿ ಎರಡು ದಿನಗಳ ಹಿಂದೆ ಕೆ ಅರ್ ನಗರ ತಾಲ್ಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ರೂ. ಅರ್ಧ ಕೋಟಿ ವೆಚ್ಚದ ನೀರಾವರಿ ಇಲಾಖೆಯ ಕಾಮಗಾರಿಯನ್ನು ಸಂಸದೆ ಸುಮಲತಾ ಅವರು ಉದ್ಘಾಟಿಸಲು ಆಗಮಿಸಿದಾಗ ಅವರ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಅದು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸುಮಲತಾ ಅವರ ಕಾರು ಚಾಲಕನ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರಂತೆ. ಹಲ್ಲೆ ಆದ ನಂತರ ಸುಮಲತಾ ಅವರು, ಸಾಲಿಗ್ರಾಮ ಪೊಲೀಸ್ ಸ್ಟೇಶನ್ ನಲ್ಲಿ ದೂರನ್ನು ಸಹ ದಾಖಲಿಸಿದ್ದಾರೆ.
ಇದೇ ವಿಷಯವಾಗಿ ಶುಕ್ರವಾರದಂದು ಸಾರಾ ಮಹೇಶ್ ಅವರನ್ನು ಮೈಸೂರಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ, ಅವರು ಗಲಾಟೆ ನಡೆದಾಗ ನಾನು ವಿಧಾನಸಭೆ ಅಧಿವೇಶನದಲ್ಲಿದ್ದೆ, ಅಲ್ಲಿ ಫೋನ್ ಸಿಕ್ಕಲ್ಲ, ಮೈಸೂರಿಗೆ ಬಂದು ವಿಷಯ ಸಂಗ್ರಹಿಸಿದ್ದೇನೆ. ಉಳಿದ ವಿಷಯ ಜಿಲ್ಲಾಧಿಕಾರಿಗಳ ಸುಪರ್ದಿಗೆ ಬಿಟ್ಟಿದ್ದು. ಶಿಷ್ಟಾಚಾರ ಉಲ್ಲಂಘನೆಯಾಗಿರುವ ಬಗ್ಗೆ ಅವರು ನೀಡುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು. ಸುಮಲತಾ ಅವರ ವಿರುದ್ಧ ದೂರು ದಾಖಲಿಸುವ ಬಗ್ಗೆ ಅವರು ಏನನ್ನೂ ಹೇಳಲಿಲ್ಲ.
ಸುಮಲತಾ ಅವರು ಮಾಡಿದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕನಾದ ತನ್ನನ್ನು ಆಹ್ವಾನಿಸದೆ ಶಿಷ್ಟಾಚಾರದ ಉಲ್ಲಂಘನೆ ಮಾಡಿದ್ದಾರೆ ಎಂದು ಮಹೇಶ್ ಅವರು ಅರೋಪಿಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ; ಸಿನಿಮಾರಂಗವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಸುಮಲತಾ ಅಂಬರೀಶ್