ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಾಗಿರೋದು ನಿಜ ಆದರೆ ಅವರ ಜನಪ್ರಿಯತೆ ಕೊಂಚವೂ ಕಡಿಮೆಯಾಗಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 31, 2021 | 10:37 PM

ದೇವೇಗೌಡರಿಗೆ ಮೊದಲಿನ ಹಾಗೆ ಕಾರಿನಿಂದ ಇಳಿಯುವುದು ಹತ್ತುವುದು, ಓಡಾಡುವುದು ಆಗುವುದಿಲ್ಲ. ಆದರೂ ಅವರು ಮಹಿಳಾ ಕಾರ್ಯಕರ್ತರಿಗೆ ನಿರಾಶೆಗೊಳಿಸುವುದಿಲ್ಲ. ಬಾಡಿಗಾರ್ಡ್ ಒಬ್ಬರ ಸಹಾಯದಿಂದ ಅವರು ಕಾರಿನಿಂದ ಹೊರಬರುತ್ತಾರೆ.

ಅದು ರಾಜಕೀಯ ಸಮಾರಂಭ ಅಲ್ಲ, ಪಕ್ಷದ ಕಾರ್ಯಕ್ರಮ ಅಲ್ಲ ಅಥವಾ ಮದುವೆ ಸಮಾರಂಭವೂ ಅಗಿರಲಿಲ್ಲ. ಆದರೂ ಜನ ಜಾತ್ರೆಯಂತೆ ಅಲ್ಲಿ ನೆರೆದಿದ್ದರು. ಇದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಪ್ರಧಾನ ಮಂತ್ರಿ ಮತ್ತು ಜೆಡಿ(ಎಸ್) ಪಕ್ಷದ ಪಿತಾಮಹ ಎಚ್ ಡಿ ದೇವೇಗೌಡರು ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಂಡ ದೃಶ್ಯ. ಈ ಕ್ಷೇತ್ರದ ಮುಖ್ಯ ರಸ್ತೆ ನಗರದ ಎಲ್ಲ ರಸ್ತೆಗಳ ಹಾಗೆ ಎಕ್ಕುಟ್ಟಿ ಹೋಗಿದೆ. ಅದನ್ನು ವೀಕ್ಷಿಸಲೆಂದು ದೇವೇಗೌಡರು ಅಗಮಿಸಿದ್ದರು. ಗೌಡರಿಗೆ ವಯಸ್ಸಾಗಿರಬಹುದು ಆದರೆ, ಜನಪ್ರಿಯತೆ ಮಾತ್ರ ಒಂದಿಷ್ಟೂ ತಗ್ಗಿಲ್ಲ. ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳಿದ್ದಾರೆ.

ಈ ವಿಡಿಯೋನಲ್ಲಿ ಹಲವಾರು ಮಹಿಳೆಯರು ಗೌಡರ ಜೊತೆ ಸೆಲ್ಫೀ ತೆಗೆದುಕೊಳ್ಳಲು ತವಕಿಸುತ್ತಿದ್ದಾರೆ. ಅವರೆಲ್ಲ ಕಾರಿಗೆ ಮುಗಿ ಬಿದ್ದಿರುವುದನ್ನು ನೀವು ನೋಡಬಹುದು. ದೇವೇಗೌಡರಿಗೆ ಮೊದಲಿನ ಹಾಗೆ ಕಾರಿನಿಂದ ಇಳಿಯುವುದು ಹತ್ತುವುದು, ಓಡಾಡುವುದು ಆಗುವುದಿಲ್ಲ. ಆದರೂ ಅವರು ಮಹಿಳಾ ಕಾರ್ಯಕರ್ತರಿಗೆ ನಿರಾಶೆಗೊಳಿಸುವುದಿಲ್ಲ. ಬಾಡಿಗಾರ್ಡ್ ಒಬ್ಬರ ಸಹಾಯದಿಂದ ಅವರು ಕಾರಿನಿಂದ ಹೊರಬರುತ್ತಾರೆ. ಅಷ್ಟೇ ಅಲ್ಲ, ಅದೇ ಅಂಗರಕ್ಷಕನ ಸಹಾಯದಿಂದ ಯಾವುದೋ ಒಂದು ವಸ್ತುವಿನ ಮೇಲೆ ಎಲ್ಲರಿಗೂ ಕಾಣುವ ಹಾಗೆ ನಿಂತುಕೊಳ್ಳುತ್ತಾರೆ!

ಮಹಿಳೆಯರು ಪಟಪಟಾಂತ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಳ್ಳಲಾರಂಭಿಸುತ್ತಿದ್ದಂತೆ ಗೌಡರು ಮುಗುಳ್ನಗುತ್ತಾ ಎಲ್ಲರೆಡೆ ಕೈ ಬೀಸುತ್ತಾರೆ. ನೆರೆದಿದ್ದ ಜನರು ಅವರ ಮತ್ತು ಅವರ ಹಿರಿಯ ಮಗ ಹೆಚ್ ಡಿ ಕುಮಾರಸ್ವಾಮಿಯವರ ಪರ ಘೋಷಣೆಗಳನ್ನು ಕೂಗಲು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಗೌಡರೊಂದಿಗೆ ಜೆಡಿ(ಎಸ್) ಶಾಸಕ ಆರ್ ಮಂಜುನಾಥ್ ಜೊತೆಗಿದ್ದರು.

ಇದನ್ನೂ ಓದಿ:   ಮಹೀಂದ್ರಾ ಕಂಪನಿ ವಾಹನವನ್ನು ಕಚ್ಚಿ ಎಳೆದ ಹುಲಿ: ವಿಡಿಯೋ ಹಂಚಿಕೊಂಡ ಆನಂದ್​ ಮಹೀಂದ್ರಾ

Published on: Dec 31, 2021 10:37 PM