Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ನೈಟ್ ಕರ್ಫ್ಯೂ; 10 ಗಂಟೆಗೂ ಮೊದಲೇ ಮನೆ ಸೇರಿದ ಜನ

ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ನೈಟ್ ಕರ್ಫ್ಯೂ; 10 ಗಂಟೆಗೂ ಮೊದಲೇ ಮನೆ ಸೇರಿದ ಜನ

TV9 Web
| Updated By: preethi shettigar

Updated on:Jan 01, 2022 | 8:29 AM

ನೈಟ್ ಕರ್ಫ್ಯೂ ಹಾಗೂ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಕೂಡ ಹೇರಿರುವುದರಿಂದ ಜನರು ಅದಷ್ಟು ಬೇಗ ಮನೆ ಸೇರಬೇಕಾದ ಅನಿವಾರ್ಯತೆ ಉಂಟಾಗಿತ್ತು. ಹೀಗಾಗಿ 10 ಗಂಟೆಗೂ ಮೊದಲೇ ಸ್ವಲ್ಪ ಮಂದಿ ಬಾರ್​, ಪಬ್​ಗಳಿಗೆ ತೆರಳಿದ್ದು, ಬೇಗನೆ ಮನೆ ಸೇರಿಕೊಂಡಿದ್ದರು.

ಬೆಂಗಳೂರು: ಕೊರೊನಾ ಸೋಂಕು, ಒಮಿಕ್ರಾನ್ ರೂಪಾಂತರಿ ಆತಂಕ, ಕೊವಿಡ್19 ಪ್ರಕರಣ ಹೆಚ್ಚಳ ಭೀತಿ ಈ ಎಲ್ಲಾ ಕಾರಣಗಳಿಂದ ಕರ್ನಾಟಕದಲ್ಲಿ ಹತ್ತು ದಿನಗಳ ನೈಟ್ ಕರ್ಫ್ಯೂ ವಿಧಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಇದಲ್ಲದೆ, ಹೊಸ ವರ್ಷಾಚರಣೆಗೆ ಜನಸಂದಣಿ ಹೆಚ್ಚುವ ಆತಂಕದಲ್ಲಿ ನಿನ್ನೆ (ಡಿಸೆಂಬರ್ 31) ಬೆಂಗಳೂರು ನಗರದಲ್ಲಿ ಸಂಜೆ 6 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ನೀಡಿದ್ದರು. ಕೊರೊನಾ ಮಹಾಮಾರಿ ಆಗಮನದ ಬಳಿಕ ಯಾವುದೇ ಸಂಭ್ರಮಾಚರಣೆಗಳು ತನ್ನ ಎಂದಿನ ಗೌಜು ಉಳಿಸಿಕೊಂಡಂತಿಲ್ಲ. ಕಳೆದ ವರ್ಷವೂ ಹಲವು ಬಾರಿ ಇದೇ ಅನುಭವ ಆಗಿದೆ. ಹಬ್ಬ ಹರಿದಿನಗಳ ಆಚರಣೆಗಳು ಕಟ್ಟುನಿಟ್ಟಿನ ಕ್ರಮದ ನಡುವೆಯೇ ನಡೆಯುವಂತಾಗಿದೆ. ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು ಜನರ ಗುಂಪು ಸೇರುವಿಕೆ, ಆಚರಣೆಯ ಭರಾಟೆಯನ್ನು ತಡೆದು ನಿಲ್ಲಿಸಿದೆ. ಈ ಬಾರಿಯ ಹೊಸ ವರ್ಷಾಚರಣೆ ಕೂಡ ಅದಕ್ಕೆ ಹೊರತಾಗಿಲ್ಲ.

ಸಾಮಾನ್ಯವಾಗಿ ಹೊಸ ವರ್ಷದ ಸಂಭ್ರಮ ಡಿಸೆಂಬರ್ 31ರ ತಡರಾತ್ರಿಯ ವರೆಗೆ ನಡೆಯುತ್ತದೆ. 12 ಗಂಟೆ ವೇಳೆಗೆ ಹೊಸ ವರ್ಷವನ್ನು ಸ್ವಾಗತಿಸುವುದು, ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸಹಿತ ಇತರ ಕಡೆಗಳಲ್ಲಿ ಅಥವಾ ರಾಜ್ಯದ ವಿವಿಧ ಕಡೆಗಳಲ್ಲಿ ಕೂಡ ಜನರ ಸಂಭ್ರಮಾಚರಣೆ ಜೋರಾಗಿರುತ್ತದೆ. ಡಿಜೆ, ಪಬ್, ಬಾರ್, ರೆಸ್ಟೋರೆಂಟ್​ಗಳು ತುಂಬಿ ತುಳುಕುತ್ತಿರುತ್ತವೆ. ಹೊಸ ವರ್ಷದ ಪಾರ್ಟಿಯಲ್ಲಿ ಯುವಕ- ಯುವತಿಯರಿಂದ ತೊಡಗಿ ವಯಸ್ಕರೂ ಪಾಲ್ಗೊಳ್ಳುವುದಿದೆ.

ಈ ಬಾರಿಯ ಆಚರಣೆಯಲ್ಲಿ ಇದ್ಯಾವುದೂ ಇಲ್ಲ. ಹೋಟೆಲ್, ಬಾರ್, ಪಬ್​ಗಳಲ್ಲಿ 50-50 ನಿಯಮ ಹೇರಲಾಗಿತ್ತು. ಶೇಕಡಾ 50ರಷ್ಡು ಗ್ರಾಹಕರೊಂದಿಗೆ ಈ ಬಾರಿ ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್​ಗಳು ಕಾರ್ಯನಿರ್ವಹಿಸಬೇಕಿದೆ. ಅದರ ಜೊತೆಗೆ ನೈಟ್ ಕರ್ಫ್ಯೂ ಹಾಗೂ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಕೂಡ ಹೇರಿರುವುದರಿಂದ ಜನರು ಅದಷ್ಟು ಬೇಗ ಮನೆ ಸೇರಬೇಕಾದ ಅನಿವಾರ್ಯತೆ ಉಂಟಾಗಿತ್ತು. ಹೀಗಾಗಿ 10 ಗಂಟೆಗೂ ಮೊದಲೇ ಸ್ವಲ್ಪ ಮಂದಿ ಬಾರ್​, ಪಬ್​ಗಳಿಗೆ ತೆರಳಿದ್ದು, ಬೇಗನೆ ಮನೆ ಸೇರಿಕೊಂಡಿದ್ದರು.

ಇದನ್ನೂ ಓದಿ:
ಮತ್ತೆ ಹೆಚ್ಚಾದ ಕೊವಿಡ್​ 19, ಒಮಿಕ್ರಾನ್​ ಸೋಂಕು; ದೆಹಲಿಯಲ್ಲಿ ನಾಳೆಯಿಂದ ನೈಟ್​ ಕರ್ಫ್ಯೂ ಜಾರಿ

ನೈಟ್​ ಕರ್ಫ್ಯೂ : ಅಸಮಧಾನ ವ್ಯಕ್ತಪಡಿಸಿದ ಪಬ್​ ಮಾಲೀಕರು: ಈ ಕುರಿತು ಮರುಪರಿಶೀಲನೆ ಇಲ್ಲ ಎಂದ ಸಿಎಂ ಬಸವರಾಜ ಬೊಮ್ಮಾಯಿ

Published on: Jan 01, 2022 08:28 AM