ಟೆಸ್ಟ್ ನಾಯಕತ್ವದ ರೇಸ್​​ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಉಳಿದವರಿಗಿಂತ ಹೆಚ್ಚು ಸೂಕ್ತ ಅನಿಸುತ್ತಾರೆ

ಟೆಸ್ಟ್ ನಾಯಕತ್ವದ ರೇಸ್​​ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಉಳಿದವರಿಗಿಂತ ಹೆಚ್ಚು ಸೂಕ್ತ ಅನಿಸುತ್ತಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 18, 2022 | 9:34 PM

ಸದ್ಯದ ಸ್ಥಿತಿಯಲ್ಲಿ ರಾಹುಲ್ ಉತ್ತಮ ಬೆಟ್ ಅನಿಸುತ್ತಾರೆ. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ನಾಯಕತ್ವ ವಹಿಸಿರುವ ಅನುಭವ ಕನ್ನಡಿಗನಿಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಅವರು ಪ್ರದರ್ಶಿಸಿದ ನಾಯಕತ್ವದ ಗುಣಗಳನ್ನು ಖುದ್ದು ಕಿಂಗ್ ಕೊಹ್ಲಿ ಶ್ಲಾಘಿಸಿದ್ದಾರೆ. ರಾಹುಲ್ ನಾಯಕನಾದರೆ ಅವರಿಗೆ ಕೊಹ್ಲಿ ಮತ್ತು ರೋಹಿತ್ ಮಾರ್ಗದರ್ಶನವಂತೂ ಇದ್ದೇ ಇರುತ್ತದೆ.

ದಕ್ಷಿಣ ಅಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ನಂತರ ಟೆಸ್ಟ್ ಕ್ರಿಕೆಟ್ ನಾಯಕತ್ವ ತ್ಯಜಿಸಿ ವಿಶ್ವದ ಆಗ್ರಮಾನ್ಯ ಬ್ಯಾಟರ್​ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ವಿಶ್ವವನ್ನು ಶಾಕ್​ಗೊಳಪಡಿಸಿದರು. ಅವರ ನಿರ್ಧಾರ ಅನಿರೀಕ್ಷಿತವಾಗುತ್ತಾದರೂ ಕೊಹ್ಲಿಯನ್ನು ಹತ್ತಿರದಿಂದ ಬಲ್ಲವರು ಇದನ್ನು ನಿರೀಕ್ಷಿಸಿದ್ದರು. ಸೌರವ್ ಗಂಗೂಲಿ (Sourav Ganguli) ನೇತೃತ್ವದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಚೇತನ್ ಶರ್ಮಾ (Chetan Sharma) ನೇತೃತ್ವದ ಆಯ್ಕೆ ಸಮಿತಿ ಕೊಹ್ಲಿಯನ್ನು ಕೆಟ್ಟದ್ದಾಗಿ ನಡೆಸಿಕೊಂಡು ಅವರು ನಾಯಕತ್ವ ತ್ಯಜಿಸುವ ಸ್ಥಿತಿಗೆ ದೂಡಿತು. ಗಂಗೂಲಿ ಮಂಡಳಿಯ ಅಧ್ಯಕ್ಷರಾದ ಮೇಲೆ ಅದರ ಕಾರ್ಯವೈಖರಿ ಬದಲಾದೀತು ಅನ್ನುವ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಸುಳ್ಳಾಗಿದೆ. ಭಾರತದ ಮಹಾನ್ ಬ್ಯಾಟರ್ ಮತ್ತು ಸರ್ವಶ್ರೇಷ್ಠ ನಾಯಕನನ್ನು ಗಂಗೂಲಿ ಮತ್ತು ಕಂಪನಿ ಅವಮಾನಿಸಿದ್ದನ್ನು ಭಾರತದ ಕ್ರಿಕೆಟ್ ಪ್ರೇಮಿ ಯಾವತ್ತೂ ಕ್ಷಮಿಸಲಾರ!

ಕೊಹ್ಲಿ ವಿಷಯವನ್ನು ಬೇರೆ ಸಮಯದಲ್ಲಿ ದೀರ್ಘವಾಗಿ ಚರ್ಚಿಸುವ ಮಾರಾಯ್ರೇ. ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವ ಯಾರಿಗೆ ನೀಡಬೇಕು ಅನ್ನುವುದರ ಬಗ್ಗೆ ದೇಶದೆಲ್ಲೆಡೆ ವ್ಯಾಪಕವಾಗಿ ಚರ್ಚೆ ನಡೆದಿದೆ. ಕೊಹ್ಲಿಯ ಜಾಗಕ್ಕೆ ಯಾರು? ಅವರ ಸ್ಥಾನವನ್ನು ಯಾರೂ ತುಂಬಲಾಲರು-ಅದು ಬೇರೆ ವಿಷಯ. ಟೆಸ್ಟ್ ನಾಯಕತ್ವಕ್ಕೆ ಐವರ ಹೆಸರು ಮುನ್ನೆಲೆಗೆ ಬರುತ್ತಿದೆ-ರೋಹಿತ್ ಶರ್ಮ, ಕೆ ಎಲ್ ರಾಹುಲ್, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ.

ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ಉಪನಾಯಕನಾಗಿದ್ದರಿಂದ ಸಹಜವಾಗೇ ಮೊದಲ ಆದ್ಯತೆ ಮುಂಬೈ ಬ್ಯಾಟರ್ ಆಗಿರುತ್ತಾರೆ. ಗಾಯದ ಕಾರಣ ರೋಹಿತ್ ಪ್ರವಾಸ ತಪ್ಪಿಸಿಕೊಳ್ಳದೆ ಹೋಗಿದ್ದರೆ ಸರಣಿಯಯ ಎರಡನೇ ಟೆಸ್ಟ್ನಲ್ಲಿ ಅವರೇ ಟೀಮ್ ಇಂಡಿಯವನ್ನು ಲೀಡ್ ಮಾಡುತ್ತಿದ್ದರು. ರೋಹಿತ್ ಅವರನ್ನು ಈಗಾಗಲೇ ಸೀಮಿತ ಓವರ್ಗಳ ಎರಡೂ ಆವೃತ್ತಿಗಳಿಗೆ ಕ್ಯಾಪ್ಟನ್ ಅಂತ ಘೋಷಿಸಲಾಗಿದೆ. ಆದರೆ ಸದ್ಯದ ಸ್ಥಿತಿ ಮತ್ತು ಭವಿಷ್ಯದ ದೃಷ್ಟಿಯಿಂದ ರೋಹಿತ್ ಅವರನ್ನು ಟೆಸ್ಟ್ ಕ್ರಿಕೆಟ್​ಗೂ ಕ್ಯಾಪ್ಟನ್ ಮಾಡುವ ನಿರ್ಧಾರ ಬಿಸಿಸಿಐ ತೆಗೆದುಕೊಳ್ಳಲಾರದು. ಅವರಿಗೆ ಈಗ 34 ರ ಪ್ರಾಯ ಮತ್ತು ಸದಾ ಒಂದಿಲ್ಲೊಂದು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಶಾರ್ಟ್-ಟರ್ಮ್-ಪ್ಲ್ಯಾನ್ ಆದರೆ ಓಕೆ, ಆದರೆ ಬಿಸಿಸಿಐ ಮುಂದಿನದನ್ನು ಯೋಚಿಸಬೇಕಿದೆ.

ಸದ್ಯದ ಸ್ಥಿತಿಯಲ್ಲಿ ರಾಹುಲ್ ಉತ್ತಮ ಬೆಟ್ ಅನಿಸುತ್ತಾರೆ. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ನಾಯಕತ್ವ ವಹಿಸಿರುವ ಅನುಭವ ಕನ್ನಡಿಗನಿಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಅವರು ಪ್ರದರ್ಶಿಸಿದ ನಾಯಕತ್ವದ ಗುಣಗಳನ್ನು ಖುದ್ದು ಕಿಂಗ್ ಕೊಹ್ಲಿ ಶ್ಲಾಘಿಸಿದ್ದಾರೆ. ರಾಹುಲ್ ನಾಯಕನಾದರೆ ಅವರಿಗೆ ಕೊಹ್ಲಿ ಮತ್ತು ರೋಹಿತ್ ಮಾರ್ಗದರ್ಶನವಂತೂ ಇದ್ದೇ ಇರುತ್ತದೆ. ಪ್ರೋಟಿಯಾಗಳ ವಿರುದ್ಧ ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಅವರು ಉತ್ತಮವಾಗಿ ಟೀಮನ್ನು ಮುನ್ನಡೆಸಿದರೆ ಅವರ ದಾವೆಗೆ ನೆರವಾಗುತ್ತದೆ. ವಯಸ್ಸು ಕೂಡ (29) ರಾಹುಲ್ ಪರವಾಗಿದೆ.

24 ವರ್ಷ ವಯಸ್ಸಿನ ರಿಷಭ್ ಪಂತ್ ಅವರ ಆಕ್ರಮಣಕಾರಿ ಮನೋಭಾವ ಗಮನ ಸೆಳೆಯುತ್ತದೆ. ಟೆಸ್ಟ್ ಪಂದ್ಯವೊಂದರ ಕೊನೆ (4ನೇ) ಇನ್ನಿಂಗ್ಸ್​ನಲ್ಲಿ ಸತತವಾಗಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿರುವುದು ಪಂತ್ ಅವರ ಕ್ಲಾಸ್, ಸಂಕಲ್ಪ ಮತ್ತು ದಿಟ್ಟತನಕ್ಕೆ ಸಾಕ್ಷಿಯಾಗಿದೆ. ಮೂರನೇ ಟೆಸ್ಟ್ ನಲ್ಲಿ ಅವರು ಬಾರಿಸಿದ ಅಜೇಯ ಶತಕ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಇನ್ನಿಂಗ್ಸ್ಗಳಲ್ಲೊಂದಾಗಿದೆ. ಈ ಹುಡುಗನಲ್ಲಿ ಕೊಹ್ಲಿಯಂತೆ ಛಲವಿದೆ, ಟೀಮಿನ ಶ್ರೇಯಸ್ಸಿಗಾಗಿ ಶ್ರಮಿಸುವ ಬದ್ಧತೆಯಿದೆ. ಐಪಿಎಲ್ನಲ್ಲಿ ಡೆಲ್ಲಿ ತಂಡದ ನಾಯಕತ್ವ ವಹಿಸಿದ ಅನುಭವವೂ ಇದೆ.

ಅನುಭವಕ್ಕೆ ಆದ್ಯತೆ ನೀಡಿದ್ದೇಯಾದರೆ, ತಮಿಳುನಾಡಿನ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಪರಿಗಣಿಸಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ, ಅಶ್ವಿನ್ ಅವರಲ್ಲಿ ಆಕ್ರಮಣಶೀಲತೆಯ ಕೊರತೆಯಿದೆ, ಅವರು ರಕ್ಷಣಾತ್ಮಕ ಮನೋಭಾವದವರು. 90 ದಶಕದಲ್ಲಾದರೆ ಅವರು ಟೀಮಿನ ನಾಯಕತ್ವಕ್ಕೆ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಿದ್ದರು. ಈಗ ನಾಯಕತ್ವದ ಆಯಾಮ ಬದಲಾಗಿದೆ.

ದಕ್ಷಿಣ ಆಫ್ರಿಕನಲ್ಲಿ ಬುಧವಾರದಿಂದ ಆರಂಭವಾಗಲಿರುವ ಒಡಿಐ ಸರಣಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕನಾಗಿ ಘೋಷಿಸುವ ಮೂಲಕ ಅವರನ್ನು ಸಹ ಕಾಪ್ಟನ್ಸಿ ಮಟೇರಿಯಲ್ ಆಗಿ ಪರಿಗಣಿಸಲಾಗುತ್ತಿದೆ ಎಂಬ ಸಂದೇಶವನ್ನು ಬಿಸಿಸಿಐ ನೀಡಿದೆ. ಕಪಿಲ್ ದೇವ್ ನಂತರ ವೇಗದ ಬೌಲರ್ನೊಬ್ಬ ಟೀಮ್ ಇಂಡಿಯಾದ ನಾಯಕತ್ವ ವಹಿಸಿಲ್ಲ. ಕಪಿಲ್ ಅಕ್ರಮಣಕಾರಿ ಮನೋಭಾವದ ನಾಯಕರಾಗಿದ್ದರು. ಬುಮ್ರಾ ಇನ್ನೂ ಯುವಕ ಮತ್ತು ಇದುವರೆಗೆ ಕೇವಲ 27 ಟೆಸ್ಟ್ ಮಾತ್ರ ಆಡಿದ್ದಾರೆ. ಅವರ ಮೇಲೆ ಈಗಲೇ ನಾಯತ್ವದ ಹೊರೆ ಹಾಕುವುದು ಸರಿಯೆನಿಸಲಾರದು.

ಇದನ್ನೂ ಓದಿ:   ದೇಸಿ ಕ್ರಿಕೆಟ್‌ನಲ್ಲಿ ಮತ್ತೆ ತಲೆ ಎತ್ತಿದ ಫಿಕ್ಸಿಂಗ್ ಭೂತ: ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳಲು ಆಟಗಾರ ಸತೀಶ್ ರಾಜಗೋಪಾಲ್‌ಗೆ 40 ಲಕ್ಷ ರೂಪಾಯಿ ಆಫರ್