ಕೆ. ಶಿವರಾಮ್ ಇನ್ನಿಲ್ಲ: ಮಾವನ ನಿಧನದ ಬಳಿಕ ನಟ ಪ್ರದೀಪ್ ಭಾವುಕ ಪ್ರತಿಕ್ರಿಯೆ
ಕೆ. ಶಿವರಾಮ್ ಅವರ ನಿಧನದ ಬಳಿಕ ಅವರ ಅಳಿಯ, ನಟ ಪ್ರದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿದ್ದ ಶಿವರಾಮ್ ಅವರು ಚಿಕಿತ್ಸೆಗೆ ಸ್ಪಂದಿಸದೇ ವಿಧಿವಶರಾಗಿದ್ದಾರೆ. ಶುಕ್ರವಾರ (ಮಾರ್ಚ್ 1) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಶಿವರಾಮ್ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ, ಸಿನಿಮಾ ನಟ ಕೆ. ಶಿವರಾಮ್ (K Shivaram) ಅವರು ತೀವ್ರ ಅನಾರೋಗ್ಯದಿಂದ ಇಂದು (ಫೆಬ್ರವರಿ 29) ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಶಿವರಾಮ್ ನಿಧನದ (K Shivaram Death) ಬಳಿಕ ಅವರ ಅಳಿಯ, ನಟ ಪ್ರದೀಪ್ (Actor Pradeep) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಅವರು ಭಾವುಕರಾಗಿದ್ದಾರೆ. ‘ನಮ್ಮ ಮಾವ ಸುಮಾರು 20 ದಿನಗಳಿಂದ ಆಸ್ಪತ್ರೆಯಲ್ಲಿ ಇದ್ದರು. ಇವತ್ತು ನಾಲ್ಕು ಸಂಜೆ 4.18ಕ್ಕೆ ಕೊನೆಯುಸಿರು ಎಳೆದಿದ್ದಾರೆ. ತುಂಬ ಬೇಸರ ಆಗುತ್ತಿದೆ. ಕರ್ನಾಟಕ ಕಂಡ ಪ್ರಮುಖ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರಾಗಿದ್ದರು. ಕನ್ನಡದಲ್ಲಿ ಮೊದಲ ಬಾರಿ ಐಎಎಸ್ ಪಾಸ್ ಆದ ವ್ಯಕ್ತಿ ಇಂದು ನಮ್ಮ ಜೊತೆ ಇಲ್ಲ ಎಂದು ಹೇಳಲು ಬೇಜಾರಾಗುತ್ತಿದೆ’ ಎಂದಿದ್ದಾರೆ ಪ್ರದೀಪ್. 2017ರಲ್ಲಿ ಪ್ರದೀಪ್ ನಟನೆಯ ‘ಟೈಗರ್’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಕೆ. ಶಿವರಾಮ್ ಅವರು ಒಂದು ಪಾತ್ರ ಮಾಡಿದ್ದರು. ಅದು ಅವರು ನಟಿಸಿದ ಕೊನೆಯ ಸಿನಿಮಾ. ಚಿತ್ರರಂಗದಲ್ಲಿ ಮತ್ತೆ ತೊಡಗಿಕೊಳ್ಳಬೇಕು ಎಂಬ ಹಂಬಲ ಅವರಿಗೆ ಇತ್ತು. ಆದರೆ ಇಂದು ಅವರು ನಿಧನರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.