ರಾತ್ರಿ ಧೋ ಅಂತ ಸುರಿದ ಮಳೆಗೆ ಆನೇಕಲ್​ನ ಕಮ್ಮಸಂದ್ರ ಏರಿಯಾ ಜಲಾವೃತ, ನಿವಾಸಿಗಳಿಗೆ ಗೃಹಬಂಧನ!

|

Updated on: Aug 12, 2024 | 12:16 PM

ಮಾತೆತ್ತಿದರೆ ಬ್ರ್ಯಾಂಡ್ ಬೆಂಗಳೂರು, ನಗರವನ್ನು ಸಿಂಗಪೂರ್ ಮಾಡುತ್ತೇವೆ ಎನ್ನುವ ನಮ್ಮ ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ಇದು ಎರಡನೇ ಮಳೆಗಾಲ. ಇನ್ಯಾವಾಗ ಅವರು ಕಾರ್ಯಪ್ರವೃತ್ತರಾಗಿ ನಗರದ ನಿವಾಸಿಗಳ ಮನಸ್ಸಿನಿಂದ ಮಳೆಗಾಲದ ಭೀತಿ ನಿವಾರಿಸುತ್ತಾರೋ?

ಬೆಂಗಳೂರು: ಬೆಂಗಳೂರು ನಗರ ಮತ್ತು ಆನೇಕಲ್ ಪಟ್ಟಣ ಬೇರೆ ಬೇರೆಯೇನೂ ಅಲ್ಲ, ಅವೆರಡೂ ಜೊತೆಗೂಡಿವೆ, ಹಾಗಾಗಿ ಆನೇಕಲ್​ ಅನ್ನು ಬೆಂಗಳೂರು ನಗರದ ಭಾಗವೆಂದೇ ಪರಿಗಣಿಸಲಾಗುತ್ತದೆ. ಇದನ್ನು ಯಾಕೆ ಹೈಲೈಟ್ ಮಾಡಬೇಕಾಗಿದೆಯೆಂದರೆ, ನಿನ್ನೆ ರಾತ್ರಿ ಸುರಿದ ಮಳೆಯಿಂದ ಆನೇಕಲ್​ನ ಕಮ್ಮಸಂದ್ರ ಏರಿಯಾ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇಲ್ಲಿರುವ ಸುಂದರ ಮನೆಗಳನ್ನು ನೋಡಿ, ಅವುಗಳ ಸುತ್ತ ನೀರು! ಲಕ್ಷಾಂತರ ಹಣ ಖರ್ಚು ಮಾಡಿ ಮನೆ ಕಟ್ಟಿ ಪ್ರಯೋಜನವೇನು ಬಂತು? ನಿವಾಸಿಗಳು ತಮ್ಮ ತಮ್ಮ ಮನೆಗಳಿಂದ ಹೊರಬರುವಂತಿಲ್ಲ. ಇದು ಕಮ್ಮಸಂದ್ರ ಏರಿಯಾದ ಡ್ಯಾಡೀಸ್ ಗಾರ್ಡನ್ ಲೇಔಟ್ ಅಂತೆ, ಡ್ಯಾಡಿಗಳಿಗೆಲ್ಲ ಮಮ್ಮಿಗಳ ನೆನಪಾಗಿರಬಹುದು! ಕೋರ್ಟ್ ಕಚೇರಿಗಳಿಗೆ ಹೋಗುವ ಜನ ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನಿಂದ ಮನೆಯಿಂದ ಹೊರಬಿದ್ದು ಮುಖ್ಯ ರಸ್ತೆ ತಲುಪುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಮಕ್ಕಳ ಶಾಲೆಗಳಿಗೆ ಅಘೋಷಿತ ರಜೆ. ಆದರೆ, ತ್ರೈಮಾಸಿಕ ಪರೀಕ್ಷೆಗಳಿರುವ ಮಕ್ಕಳು ಹೇಗಾದರೂ ಮಾಡಿ ಶಾಲೆ ತಲುಪಲೇಬೇಕು. ಅದೆಲ್ಲ ಸರಿ, ಬೆಂಗಳೂರು ನಗರ ಮಾನ್ಸೂನ್ ಸೀಸನಲ್ಲಿ ವಾಸಯೋಗ್ಯ ಆಗೋದು ಇನ್ಯಾವ ಕಾಲದಲ್ಲೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Bengaluru Rain: ಬೆಂಗಳೂರು ಮಳೆ ನಿಂತರೂ ಅವಾಂತರ ನಿಂತಿಲ್ಲ, ಕರೆಯಂತಾದ ರಸ್ತೆಗಳು, ಹಲವೆಡೆ ಟ್ರಾಫಿಕ್

Follow us on