ಚಾಲುಕ್ಯರ ಕಾಲದ ಐತಿಹಾಸಿಕ ದೇವಾಲಯಗಳಲ್ಲಿ ಬಿರುಕು, ಫೋಟೋಸ್ ಶೇರ್ ಮಾಡಿ ನಿರ್ವಹಣೆಗೆ ಮನವಿ ಮಾಡಿದ ನಟ ಅನಿರುದ್ಧ್
ಐಹೊಳೆಯ ಪುರಾತನ ದೇವಾಲಯಗಳಲ್ಲಿ ಕೆಲವೆಡೆ ಸಣ್ಣ ಬಿರುಕುಗಳು ಕಾಣಿಸಿಕೊಂಡಿವೆ. ಈ ಬಗ್ಗೆ ನಟ ಅನಿರುದ್ಧ ಧ್ವನಿ ಎತ್ತಿದ್ದಾರೆ. ನಟ ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ಬಿರುಕುಬಿಟ್ಟ ಐತಿಹಾಸಿಕ ದೇವಸ್ಥಾನಗಳ ಫೋಟೋಗಳನ್ನು ಹಂಚಿಕೊಂಡಿದ್ದು ನಿರ್ವಹಣೆಗೆ ಮನವಿ ಮಾಡಿದ್ದಾರೆ.
ಬಾಗಲಕೋಟೆ, ಆಗಸ್ಟ್.21: ಚಾಲುಕ್ಯರ ರಾಜಧಾನಿಯಾಗಿದ್ದ, ವಾಸ್ತುಶಿಲ್ಪದ ತೊಟ್ಟಿಲು ಎಂದು ಪ್ರಸಿದ್ಧಿ ಪಡೆದಿರುವ ಐಹೊಳೆಯ (Aihole) ಪುರಾತನ ದೇವಾಲಯಗಳಲ್ಲಿ ಕೆಲವೆಡೆ ಸಣ್ಣ ಬಿರುಕುಗಳು ಕಾಣಿಸಿಕೊಂಡಿವೆ. ಈ ಬಗ್ಗೆ ನಟ ಅನಿರುದ್ಧ್ (Aniruddha Jatkar) ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದು ನಿರ್ವಹಣೆಗೆ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿರುಕುಬಿಟ್ಟ ಐತಿಹಾಸಿಕ ದೇವಸ್ಥಾನಗಳ ಫೋಟೋಗಳನ್ನು ಹಂಚಿಕೊಂಡಿದ್ದು ನಿರ್ವಹಣೆಗೆ ಮನವಿ ಮಾಡಿದ್ದಾರೆ.
ಐಹೊಳೆ ಶಿಲ್ಪಕಲೆಯ ತೊಟ್ಟಿಲು, ದೇವಸ್ಥಾನಗಳ ಬೀಡು. ಇಲ್ಲಿಗೆ ಜಿಲ್ಲೆ, ದೇಶ, ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಪ್ರತಿದಿನ ಭೇಟಿ ನೀಡುತ್ತಾರೆ. ಆದರೆ ಇಲ್ಲಿರುವ ದೇವಸ್ಥಾನಗಳ ಸಂಕೀರ್ಣದಲ್ಲಿ ಕೆಲವು ದೇವಸ್ಥಾನಗಳ ಶಿಲ್ಪ, ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಬಗ್ಗೆ ಸ್ಯಾಂಡಲ್ ವುಡ್ನ ಖ್ಯಾತ ನಟ, ಸಾಮಾಜಿಕ ಕಾರ್ಯಕರ್ತ ಅನಿರುದ್ಧ ಜತ್ಕರ್ ಅವರು ಧ್ವನಿ ಎತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹಾಗೂ ಐತಿಹಾಸಿಕ ದೇವಾಲಯಗಳ ಸೂಕ್ತ ನಿರ್ವಹಣೆಗೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಚಿತ್ರನಟ ಅನಿರುದ್ಧ್ ಬಾಗಲಕೋಟೆಗೆ ಭೇಟಿ ನೀಡಿದ್ದಳು. ಈ ವೇಳೆ ಐಹೊಳೆಗೂ ಭೇಟಿ ನೀಡಿ ಇಲ್ಲಿನ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಂಡಿದ್ದರು. ಈ ವೇಳೆ ಗೋಡೆಗಳು, ಶಿಲ್ಪಗಳ ಮೇಲೆ ಬಿರುಕು ಕಾಣಿಸಿದ್ದು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ದುರಸ್ತಿ ಮತ್ತು ಸೂಕ್ತ ನಿರ್ವಹಣೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಐಹೊಳೆ ಗ್ರಾಮಸ್ಥರಲ್ಲಿ ಮನೆ ಉರುಳುವ ಆತಂಕ; ಸ್ಥಳಾಂತರಕ್ಕೆ ಆಗ್ರಹ
ದೇವಾಲಯಗಳಲ್ಲಿ ಬಿರುಕು ಬಿಟ್ಟ ಬಗ್ಗೆ ಅಧಿಕಾರಿಗಳು ಹೇಳಿದ್ದೇನು?
ಶಿಲ್ಪಗಳು ಬಿರುಕು ಬಿಟ್ಟ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ಮರಳುಗಲ್ಲಿನ ದೇವಸ್ಥಾನಗಳಲ್ಲಿ ಆಗಾಗ ಸಣ್ಣ ಬಿರುಕು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಬಗ್ಗೆ ಅಧ್ಯಯನ ನಡೆಸಿ ಕಾಮಗಾರಿ ಕೈಗೊಳ್ಳಬೇಕು. ಶಿಲ್ಪಗಳಲ್ಲಿ ಬಿರುಕು ಬಿಟ್ಟಿದ್ದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಮಗಾರಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲುಕ್ಯರ ರಾಜಧಾನಿಯಾಗಿದ್ದ ಐಹೊಳೆಯಲ್ಲಿ ದುರ್ಗಾ ದೇವಸ್ಥಾನ, ಮಲ್ಲಿಕಾರ್ಜುನ, ಲಾಡಖಾನ್ ದೇವಸ್ಥಾನಗಳು ಸೇರಿ ಒಟ್ಟು 120 ಐತಿಹಾಸಿಕ ದೇವಸ್ಥಾನಗಳಿವೆ. ಅಂದಾಜು 1,200 ವರ್ಷಗಳ ಹಿಂದಿನ ಈ ದೇಗುಲಗಳನ್ನು ಮರಳು ಕಲ್ಲಿನಿಂದ ನಿರ್ಮಿಸಲಾಗಿದೆ. ಐಹೊಳೆ ಗುಹಾಂತರ ದೇವಾಲಯಗಳ ವಾಸ್ತುಶಿಲ್ಪ ಜಗತ್ಪ್ರಸಿದ್ಧಿ ಪಡೆದಿದೆ. ಇಲ್ಲಿನ ದುರ್ಗಾ ದೇವಸ್ಥಾನ ಸಂಸತ್ ಭವನಕ್ಕೆ ಸ್ಫೂರ್ತಿಯಾಗಿದೆ. ಆದರೆ ಐಹೊಳೆಯ ಕೆಲ ದೇವಸ್ಥಾನಗಳ ಗೋಡೆಗಳು ಹಾಗೂ ಶಿಲ್ಪಗಳಲ್ಲಿ ಅಲ್ಪ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಪುರಾತತ್ವ ಇಲಾಖೆ ಪ್ರತಿ ವರ್ಷವೂ ದೇವಾಲಯಗಳ ಸಮೀಕ್ಷೆ ನಡೆಸುತ್ತೆ. ಆದರೆ ಸುಮಾರು 64 ವರ್ಷಗಳ ಹಿಂದೆ ದುರಸ್ತಿ ಕಾರ್ಯ ನಡೆಸಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ