‘ಈ ಜಾಥಾದ ಚಿತ್ರಕಥೆ ಸರಿಯಿಲ್ಲ; ಕಥೆಯೇ ಫ್ಲಾಪ್​’: ಮೇಕೆದಾಟು ಪಾದಯಾತ್ರೆ ಬಗ್ಗೆ ನಟಿ ಶ್ರುತಿ ಖಂಡನೆ

| Updated By: ಮದನ್​ ಕುಮಾರ್​

Updated on: Jan 12, 2022 | 3:37 PM

‘ಸಿನಿಮಾದ ಭಾಷೆಯಲ್ಲಿ ಹೇಳುವುದಾದರೆ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯ ಚಿತ್ರಕಥೆಯೇ ಸರಿಯಿಲ್ಲ. ಕಥೆಯೇ ಫ್ಲಾಪ್ ಆಗಿದೆ’ ಎಂದು ಹಿರಿಯ ನಟಿ ​ಶ್ರುತಿ ಹೇಳಿದ್ದಾರೆ.

ಹಿರಿಯ ನಟಿ ಶ್ರುತಿ ಅವರು ಸಿನಿಮಾದ ಜತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯರಾಗಿರುವ ಅವರು ಈಗ ಮೇಕೆದಾಟು ಪಾದಯಾತ್ರೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಒಂದು ಸಿನಿಮಾ ಯಶಸ್ವಿ ಆಗಬೇಕು ಎಂದರೆ ಅದರ ಚಿತ್ರಕಥೆ ಚೆನ್ನಾಗಿ ಇರಬೇಕು. ರಿಲೀಸ್​ ಮಾಡುವ ದಿನಾಂಕ ಕೂಡ ಸೂಕ್ತವಾಗಿ ಇರಬೇಕು. ಆದರೆ ಕಾಂಗ್ರೆಸ್​ನ ಪಾದಯಾತ್ರೆ ಸಿನಿಮಾದ ಚಿತ್ರಕಥೆಯೇ ಸರಿಯಿಲ್ಲ. ಯಾರ ಮೇಲೆ ನಿಮ್ಮ ಹೋರಾಟ ಎಂಬುದೇ ನಿಮಗೆ ತಿಳಿದಿಲ್ಲ. ಮೇಕೆದಾಟು ಯೋಜನೆ ಜಾರಿಯ ವಿಳಂಬ ನೀತಿಗೆ ನೀವೇ ಕಾರಣ ಅಂತ ಗೊತ್ತಿದ್ದರೂ ನೀವು ಹೋರಾಟ ಮಾಡುತ್ತಿದ್ದೀರಿ. ಆದ್ದರಿಂದ ನಿಮ್ಮ ಕಥೆಯೇ ಫ್ಲಾಪ್​ ಅಂತ ನಿಮಗೆ ಅನಿಸುತ್ತಾ ಇಲ್ವಾ? ಜನರು ಈ ಕೊರೊನಾದ ಸಂದರ್ಭದಲ್ಲಿ ಸಾಕಷ್ಟು ಆತಂಕದಲ್ಲಿದ್ದಾರೆ. ಈಗ ನೀವು ಈ ರೀತಿಯ ಡ್ರಾಮಾ ಮಾಡುವ ಅವಶ್ಯಕತೆ ಇತ್ತಾ? ಹಿರಿಯ ನಾಯಕರು ಮಾಧ್ಯಮದವರನ್ನು ದೂಷಿಸುತ್ತಿದ್ದೀರಿ. ಆದರೆ ನಾಯಕತ್ವ ತೋರಿಸಿಕೊಳ್ಳಲು ನಿಮ್ಮದು ಒನ್​ ಮ್ಯಾನ್​ ಶೋ ಆಗಿದೆ ಎಂಬುದು ಜನರಿಗೆ ಗೊತ್ತಾಗುತ್ತಿದೆ. ನೀವು ಹೋರಾಟ ಮಾಡುತ್ತಿರುವ ಸಂದರ್ಭ ಸರಿಯಿಲ್ಲ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ರಾಜ್ಯಕ್ಕೆ ಮತ್ತೊಂದು ಆರ್ಥಿಕ ಸಂಕಷ್ಟ ಬರುವುದು ಬೇಡ. ಕೊರೊನಾ ತೊಲಗಿದ ಮೇಲೆ ನಿಮ್ಮ ಪಕ್ಷದ ಲಾಭಕ್ಕಾಗಿ ನೀವು ಹೋರಾಟ ಮುಂದುವರಿಸಬಹುದು’ ಎಂದು ನಟಿ ಶ್ರುತಿ ಹೇಳಿದ್ದಾರೆ.

ಇದನ್ನೂ ಓದಿ:

‘ಕಾಂಗ್ರೆಸ್​ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು

ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಯಾಕೆ ಬಂದಿಲ್ಲ? ಕಾರಣ ವಿವರಿಸಿದ ಮಧು ಬಂಗಾರಪ್ಪ