‘ಈಗ ಮಾತಾಡಿದರೆ ರಾಜಕೀಯ ಆಗತ್ತೆ’: ಮತದಾನದ ಬಳಿಕ ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಅವರು ಬಿಡುವು ಮಾಡಿಕೊಂಡು ಬಂದು ಮತ ಚಲಾಯಿಸಿದ್ದಾರೆ. ಕುಂದಾಪುರದ ಕೆರಾಡಿಯಲ್ಲಿ ತಾವು ಓದಿದ ಶಾಲೆಯಲ್ಲಿ ರಿಷಬ್ ಶೆಟ್ಟಿ ಮತ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ (Lok Sabha Election 2024) ಇಂದು (ಮೇ 7) ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಕೂಡ ಮತದಾನ ಮಾಡಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಉಡುಪಿಯಲ್ಲಿ ಮತ ಚಲಾಯಿಸಿದ್ದಾರೆ. ರಿಷಬ್ ಶೆಟ್ಟಿ ಅವರು ಓದಿದ್ದು ಕುಂದಾಪುರದ (Kundapura) ಕೆರಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ತಾವು ಓದಿದ ಶಾಲೆಯನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಅದೇ ಶಾಲೆಯಲ್ಲಿ ಇಂದು ಮತದಾನ ನಡೆದಿದ್ದು, ರಿಷಬ್ ಶೆಟ್ಟಿ (Rishab Shetty) ಅವರು ಮಧ್ಯಾಹ್ನ ಬಂದು ಮತ ಹಾಕಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಮತದಾನ ನಮ್ಮ ಹಕ್ಕು. ಅದು ಪ್ರತಿಯೊಬ್ಬರ ಜವಾಬ್ದಾರಿ. ಅದನ್ನು ನಾನು ಮಾಡಿದ್ದೇನೆ. ಬೆಳಗ್ಗೆ ಜಾಸ್ತಿ ಜನ ಇರುತ್ತಾರೆ. ಮಧ್ಯಾಹ್ನ ಬಂದರೆ ಬೇಗ ಓಟ್ ಹಾಕಿ ತೆರಳಬಹುದು ಅಂತ ಈ ಸಮಯದಲ್ಲಿ ಬಂದೆ. ಮುಂದಿನ ಸರ್ಕಾರದ ಮೇಲೆ ಇರುವ ನಿರೀಕ್ಷೆಗಳ ಬಗ್ಗೆ ಈಗ ಮಾತನಾಡಿದರೆ ಜಾಸ್ತಿ ರಾಜಕೀಯ ಆಗುತ್ತದೆ. ಹಾಗಾಗಿ ಅದರ ಬಗ್ಗೆ ಮಾತನಾಡುವುದು ಬೇಡ’ ಎಂದು ಅವರು ಹೇಳಿದ್ದಾರೆ.
ಶಾಲೆಯ ಕೆಲಸಗಳ ಬಗ್ಗೆಯೂ ರಿಷಬ್ ಮಾಹಿತಿ ನೀಡಿದ್ದಾರೆ. ‘ಕೆಲಸ ಶುರು ಮಾಡಿದ್ದೇವೆ. ಎಲೆಕ್ಷನ್ ಇದ್ದಿದ್ದರಿಂದ ಸಂಪೂರ್ಣ ಕೆಲಸ ಮಾಡೋಕೆ ಆಗಲಿಲ್ಲ. ಮೊದಲ ಹಂತದಲ್ಲಿ ಮೈದಾನದ ಕೆಲಸ ಶುರು ಮಾಡಿದ್ದೇವೆ. ಈಗ ಶಾಲೆ ಚಂದ ಕಾಣಿಸುತ್ತಿದೆ. ಮಕ್ಕಳಿಗೆ ಆಡಲು ಮೈದಾನ ದೊಡ್ಡದಾಗಿರಲಿ ಅಂತ ಎರಡು ಮೈದಾನ ಸೇರಿಸಿ ಒಂದು ಮಾಡಿದ್ದೇವೆ. ಕಟ್ಟಡ, ಪೀಠೋಪಕರಣ, ಪೇಂಟಿಂಗ್ ಮುಂತಾದ ಕೆಲಸದ ಬಗ್ಗೆ ನಾಳೆಯಿಂದ ಯೋಚನೆ ಮಾಡುತ್ತೇವೆ’ ಎಂದಿದ್ದಾರೆ ರಿಷಬ್ ಶೆಟ್ಟಿ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅದರ ನಡುವೆ ಬಿಡುವು ಮಾಡಿಕೊಂಡು ಕೆರಾಡಿಗೆ ಬಂದು ಮತದಾನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.