Karnataka Budget 2024: ಬಜೆಟ್ ಅಧಿವೇಶನದಲ್ಲಿ ಜೈ ಶ್ರೀರಾಮ ಘೋಷಣೆ ಕೂಗಿದ ಬಿಜೆಪಿ, ಕಾಂಗ್ರೆಸ್ ನಾಯಕರು
ಕರ್ನಾಟಕ ಬಜೆಟ್ ಅಧಿವೇಶನ 2024 ಆರಂಭವಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು. ರಾಜ್ಯಪಾಲರ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕರು ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು. ಕೂಡಲೆ ಕಾಂಗ್ರೆಸ್ ಶಾಸಕರೂ ಕೂಡ ಜೈ ಶ್ರೀರಾಮ ಎಂದು ಘೋಷಣೆ ಕೂಗಲು ಆರಂಭಿಸಿದರು.
ಬೆಂಗಳೂರು, ಫೆಬ್ರವರಿ 12: ಕರ್ನಾಟಕ ಬಜೆಟ್ ಅಧಿವೇಶನ 2024 (Karnataka Budget 2024) ಆರಂಭವಾಗಿದೆ. ಹತ್ತು ದಿನಗಳ ಕಾಲ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ಅವರು ಫೆಬ್ರವರಿ 16 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಅಧಿವೇಶನ ಇಂದು (ಫೆ.12) ಆರಂಭವಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು. ಬಜೆಟ್ ಅಧಿವೇಶನದ ಮೊದಲ ದಿನ ಬಿಜೆಪಿ ನಾಯಕರು ಕೇಸರಿ ಶಾಲೆ ಧರಿಸಿಕೊಂಡು ಬಂದಿದ್ದರು. ಕೇಸರಿ ಶಾಲು ಧರಿಸಿಕೊಂಡು ಬಂದ ಬಿಜೆಪಿ ನಾಯಕರು ರಾಜ್ಯಪಾಲರ ಭಾಷಣ ಮುಗಿಯುತ್ತಿದ್ದಂತೆ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು. ಕೂಡಲೆ ಕಾಂಗ್ರೆಸ್ ಶಾಸಕರೂ ಕೂಡ ಜೈ ಶ್ರೀರಾಮ ಎಂದು ಘೋಷಣೆ ಕೂಗಲು ಆರಂಭಿಸಿದರು. ಎರಡೂ ಪಕ್ಷದ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿತು. ಈ ನಡುವೆ ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವೆ ಸಂತೋಷ್ ಲಾಡ್ ಜೈ ಭೀಮ್ ಎಂದು ಘೋಷಣೆ ಕೂಗಿದರು.