ಕೆಪಿಎಸ್ಸಿ ರದ್ದುಗೊಳಿಸುವ ಕುರಿತು ಸಂಪುಟದಲ್ಲಿ ಚರ್ಚೆ: ಸಚಿವ ಈಶ್ವರ್ ಖಂಡ್ರೆ ಅವರಿಂದಲೇ ಮಾಹಿತಿ ಬಹಿರಂಗ

Edited By:

Updated on: Sep 13, 2026 | 1:01 PM

ಕೆಪಿಎಸ್ಸಿ ಹಗರಣಗಳ ಹಿನ್ನೆಲೆಯಲ್ಲಿ ಆಯೋಗವನ್ನು ರದ್ದುಗೊಳಿಸುವ ಕುರಿತು ಸಂಪುಟದಲ್ಲಿ ಚರ್ಚೆ ನಡೆದಿದೆ ಎಂದು ಸಚಿವ ಈಶ್ವರ್ ಖಂಡ್ರೆ ಟಿವಿ9 ಸಂದರ್ಶನದಲ್ಲಿ ತಿಳಿಸಿದ್ದಾರೆ. ಪಾರದರ್ಶಕ ಮತ್ತು ದಕ್ಷ ನೇಮಕಾತಿಗಾಗಿ ಕೆಇಎ ಅಥವಾ ಯುಪಿಎಸ್‌ಸಿ ಮಾದರಿ ಅನುಸರಿಸಲು ಸರ್ಕಾರ ಚಿಂತಿಸುತ್ತಿದೆ. ಯುವಜನರ ಹಿತದೃಷ್ಟಿಯಿಂದ ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​​ 13: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ರದ್ದುಗೊಳಿಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಸಚಿವ ಈಶ್ವರ್ ಖಂಡ್ರೆ ಅವರು ಟಿವಿ9 ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಹಗರಣ ಮುಕ್ತ ನೇಮಕಾತಿ ನಡೆಸುವುದೇ ಸರ್ಕಾರದ ಆದ್ಯತೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕಾದ ಅವರು ಎಡವಿದ್ದಾರೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಕೆಪಿಎಸ್ಸಿ ಹಗರಣದಲ್ಲಿ ಭಾಗಿಯಾದ ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಅಥವಾ ಉನ್ನತ ಹುದ್ದೆಯಲ್ಲಿದ್ದರೂ ಅವರನ್ನು ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು. ಸತ್ಯಾಂಶವನ್ನು ಹೊರಗೆ ತರಲಾಗುವುದು ಎಂದು ಖಂಡ್ರೆ ಹೇಳಿದ್ದಾರೆ. ಆಯೋಗವನ್ನು ರದ್ದುಪಡಿಸಿ, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ಮಾದರಿಯಲ್ಲಿ ಅಥವಾ ಈಗಾಗಲೇ ಅನೇಕ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ನೇಮಕಾತಿ ಮುಂದುವರಿಸಲು ಚಿಂತನೆ ನಡೆದಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರೂ ಸೇರಿ ರಾಜ್ಯ ಮತ್ತು ಯುವಕರ ಹಿತದೃಷ್ಟಿಯಿಂದ ಉತ್ತಮ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us