10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ರೂಪಾಂತರಿ ವೈರಸ್ ಸೌಮ್ಯ ಸ್ವಭಾವದ್ದು ಎಂದ ಸಚಿವ

Updated By: ವಿವೇಕ ಬಿರಾದಾರ

Updated on: Jun 11, 2025 | 9:18 PM

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಸರ್ಕಾರವು ಕೊರೊನಾ ಸಾವುಗಳ ಬಗ್ಗೆ ಸ್ಪಷ್ಟನೆ ನೀಡಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಇತ್ತೀಚಿನ ಕೊರೊನಾ ರೂಪಾಂತರಿ ಸೌಮ್ಯವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಬೆಂಗಳೂರು, ಜೂನ್​ 11: ರಾಜ್ಯಕ್ಕೆ ಕೊರೊನಾ ಮತ್ತೆ ಒಕ್ಕರಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರುತ್ತಿರುವ ಕೊರೊನಾ ಸೋಂಕಿತರ ಹಾಗೂ ಮೃತರ ಅಂಕಿ-ಸಂಖ್ಯೆಗಳ ಮಾಹಿತಿ ಪಡೆದರು.

“ಕೊರೊನಾ ಹತೋಟಿಯಲ್ಲಿದ್ದು ಜನ ಭಯಪಡುವ ಸ್ಥಿತಿ ಇಲ್ಲ. ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟ 11 ಜನರಲ್ಲಿ 10 ಜನರ ಡೆತ್ ಆಡಿಟ್ ರಿಪೋರ್ಟ್ ಬಂದಿದೆ. ಈ 10 ಜನರು ಇತರ ಮಾರಕ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕೊರೊನಾ ಕಾರಣವಲ್ಲ. ಇನ್ನೊಬ್ಬರ ಡೆತ್ ಆಡಿಟ್ ವರದಿ ಬರುವುದು ಬಾಕಿ ಇದೆ” ಎಂದು ಸಚಿವ ದಿನೇಶ್​ ಗುಂಡೂರಾವ್​ ಸಿಎಂ ಸಿದ್ದರಾಮಯ್ಯರಿಗೆ ಮಾಹಿತಿ ನೀಡಿದರು.

ಈಗಿರುವ ಕೊವಿಡ್ ರೂಪಾಂತರಿ ವೈರಸ್ ಸೌಮ್ಯ ಸ್ವಭಾವದ್ದು. ಹೀಗಾಗಿ ಆತಂಕದ ಸ್ಥಿತಿ ಇಲ್ಲ. ರಾಜ್ಯದಲ್ಲಿ ಕೊರೊನಾದಿಂದ ​ಯಾವುದೇ ಸಾವುಗಳಾಗಿಲ್ಲ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.