ಡಿಕೆ ಶಿವಕುಮಾರ್ ದಿಢೀರ್ ಮುಂಬೈ ಭೇಟಿ ಸಂಚಲನ: ಖಾಸಗಿ ಕಾರ್ಯಕ್ರಮವೋ, ಬೇರೆಯದೆ ತಂತ್ರವೋ?

Updated on: Nov 28, 2025 | 8:25 AM

ಕಾಂಗ್ರೆಸ್​ ಪಟ್ಟದ ಆಟ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಫೈನಲ್​ ಮಾಡೋಕೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ ಇದೆ. ಕುರ್ಚಿ ಕದನಕ್ಕೆ ಮದ್ದು ಅರೆಯೋಕೆ ಹೈಕಮಾಂಡ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಇದೇ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಸಂಜೆ ದಿಢೀರ್ ಆಗಿ ಮುಂಬೈಗೆ ತೆರಳಿದ್ದು, ಕುತೂಹಲ ಮೂಡಿಸಿದೆ.

ಬೆಂಗಳೂರು, ನವೆಂಬರ್ 28: ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆಯ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಸಂಜೆ ದಿಢೀರ್ ಆಗಿ ಮುಂಬೈಗೆ ತೆರಳಿದ್ದಾರೆ. ಡಿಕೆ ಶಿವಕುಮಾರ್ ಅವರ ಮುಂಬೈ ಪ್ರವಾಸ, ತೀವ್ರ ಕುತೂಹಲ ಮೂಡಿಸಿದೆ. ಈ ಮಧ್ಯೆ, ನಾನು ಯಾವುದಕ್ಕೂ ಆತುರ ಪಡಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ದಿಢೀರ್ ಮುಂಬೈ ಭೇಟಿ ಸಂಚಲನ ಸೃಷ್ಟಿಸಿದ್ದು, ಖಾಸಗಿ ಕಾರ್ಯಕ್ರಮವೋ, ಬೇರೆಯದೆ ತಂತ್ರವೋ ಎಂಬ ಪ್ರಶ್ನೆ ಮೂಡಿದೆ.

ಈ ಮಧ್ಯೆ, ಅಧಿಕಾರ ಹಂಚಿಕೆ ಕುರಿತ ಕುರ್ಚಿ ಕದನ ಇದೀಗ ಅಂತಿಮ ಹಂತ ತಲುಪಿದೆ. ಈ ಸಮಸ್ಯೆಗೆ ಇತಿಶ್ರೀ ಹಾಡಲು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಮಧ್ಯಪ್ರವೇಶಿಸಿದೆ. ನವೆಂಬರ್ 29ರಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯುವ ನಿರೀಕ್ಷೆಯಿದೆ. ಈ ಸಭೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರಿಗೂ ಬುಲಾವ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಗ್ಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಅಭಿಪ್ರಾಯಗಳನ್ನು ಹಾಗೂ ಜಾತಿವಾರು ಅಂಕಿಅಂಶಗಳನ್ನು ಸಂಗ್ರಹಿಸಿದ್ದಾರೆ. ಡಿಕೆ ಮತ್ತು ಸಿಎಂ ಬಣಗಳು ಅಧಿಕಾರ ಹಂಚಿಕೆಯ ಬಗ್ಗೆ ಪರ-ವಿರೋಧ ವಾದಗಳನ್ನು ಮಂಡಿಸುತ್ತಿದ್ದು, ಶನಿವಾರ ನಡೆಯುವ ಸಭೆಯಲ್ಲಿ ಎಲ್ಲ ಗೊಂದಲಗಳಿಗೂ ತೆರೆ ಬೀಳುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 28, 2025 08:20 AM