ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಬಿಜೆಪಿ ಆರೋಪಗಳಿಗೆ ಪರಮೇಶ್ವರ್ ತಿರುಗೇಟು

Edited By:

Updated on: Jul 11, 2026 | 3:02 PM

ಡಿಸಿಎಂ ಡಾ.ಜಿ.ಪರಮೇಶ್ವರ್​ ಶಾಶ್ವತ ವಾಸಸ್ಥಳ ಪ್ರಮಾಣಪತ್ರ ವಿತರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಈ ಪ್ರಮಾಣಪತ್ರಗಳನ್ನು ಕಾನೂನುಬದ್ಧವಾಗಿ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಅಕ್ರಮ ಆರೋಪಗಳನ್ನು ತಳ್ಳಿಹಾಕಿದ ಅವರು, ಬಾಂಗ್ಲಾದೇಶಿಗರಿಗೆ ಪೌರತ್ವ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, ಜುಲೈ 11: ‘‘ಕೇಂದ್ರ ಸರ್ಕಾರ ಎಂದಿಗೂ ಜಾತಿ ಪ್ರಮಾಣಪತ್ರಗಳನ್ನು ನೀಡಿಲ್ಲ. ರಾಜ್ಯ ಸರ್ಕಾರವೇ ಇಲ್ಲಿಯವರೆಗೆ ಅವುಗಳನ್ನು ನೀಡಿದೆ. ಇದೀಗ ವಾಸಸ್ಥಳ ಪ್ರಮಾಣಪತ್ರಗಳನ್ನು ಆಧಾರ್ ಕಾರ್ಡ್‌ನಂತಹ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ತಪ್ಪು ಇಲ್ಲ’’ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ನೀಡುತ್ತಿರುವ ಶಾಶ್ವತ ವಾಸಸ್ಥಳ ಪ್ರಮಾಣಪತ್ರ ವಿತರಣೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. ‘‘ನಾವಣಾ ಆಯೋಗವು ಎಸ್‌ಐಆರ್‌ಗೆ 13 ಮಾನದಂಡಗಳನ್ನು ನಿಗದಿಪಡಿಸಿದ್ದು, ಅದರಲ್ಲಿ ವಾಸಸ್ಥಳದ ಪ್ರಶ್ನೆ ಕೂಡ ಇದೆ. ರಾಜ್ಯ ಸರ್ಕಾರವು ತನ್ನ ಮಿತಿಯಲ್ಲಿ, ಹಿಂದೆ ಜಾತಿ ಪ್ರಮಾಣಪತ್ರಗಳನ್ನು ನೀಡಿದಂತೆಯೇ ಇದೀಗ ವಾಸಸ್ಥಳ ಪ್ರಮಾಣಪತ್ರವನ್ನು ನೀಡುತ್ತಿದೆ’’ ಎಂದರು. ‘‘ಸುಮಾರು 50-60 ಸಾವಿರ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರಗಳಿಲ್ಲದೆ ಸಿಇಟಿಯಂತಹ ಪರೀಕ್ಷೆಗಳಲ್ಲಿ ಸಮಸ್ಯೆಗಳಾಗಿದ್ದವು. ವಾಸಸ್ಥಳ ಪ್ರಮಾಣಪತ್ರದಲ್ಲಿ ಜಾತಿ ಉಲ್ಲೇಖಿಸುವುದರಿಂದ ಮಕ್ಕಳಿಗೆ ಅನುಕೂಲವಾಗುತ್ತದೆ’’ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us