ದರ್ಶನ್ ಬ್ಯಾನ್ ವಿಚಾರ: ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಪ್ರತಿಕ್ರಿಯೆ
‘ಈ ವಿಚಾರದಲ್ಲಿ ನಾವು ರಾಜಿ ಆಗಲ್ಲ. ನಾವು ಈ ಹಿಂದೆ ಎಷ್ಟೋ ಕೇಸ್ಗಳಲ್ಲಿ ಸಂಧಾನ ಮಾಡಿಸಿದ್ದೇವೆ. ಆದರೆ ಇದು ಕೊಲೆ ಪ್ರಕರಣ ಆಗಿರುವುದರಿಂದ ಎಲ್ಲವೂ ಕಾನೂನಿನ ಅಡಿಯಲ್ಲೇ ನಡೆಯಬೇಕು. ಪಾರದರ್ಶಕತೆಯಿಂದ ನಾವು ಕೆಲಸ ಮಾಡುತ್ತೇವೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ...
ರೇಣುಕಾ ಸ್ವಾಮಿ ಎಂಬ ಅಭಿಮಾನಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ (Darshan) ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಸಹಚರರನ್ನೂ ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಕೊಲೆ ಆರೋಪ ಇರುವುದರಿಂದ ದರ್ಶನ್ ಅವರನ್ನು ಚಿತ್ರರಂಗದಲ್ಲಿ ಬ್ಯಾನ್ (Darshan Ban) ಮಾಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಈ ಕುರಿತು ಮಾಹಿತಿ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (Karnataka Film Chamber) ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಮಾತನಾಡಿದರು. ‘ಯಾವ ಚಿತ್ರರಂಗದಲ್ಲೂ ನಟ-ನಟಿಯರನ್ನು ತಕ್ಷಣಕ್ಕೆ ಬ್ಯಾನ್ ಮಾಡಿಲ್ಲ. ಹಲವು ಸಭೆ ನಡೆದ ಬಳಿಕ ತೀರ್ಮಾನ ತೆಗೆದುಕೊಂಡಿದ್ದರು. ನಮ್ಮಲ್ಲಿ ದರ್ಶನ್ ಬಂಧನವಾಗಿ ಮೂರು ದಿನ ಆಗಿದೆ ಅಷ್ಟೇ. ನಮಗೂ ಸಮಯಾವಕಾಶ ಬೇಕು. ಈ ವಿಚಾರದಲ್ಲಿ ಸಂಧಾನ ಆಗಲ್ಲ. ದರ್ಶನ್ ಜೊತೆ ಯಾವ ಸಿನಿಮಾಗಳು ಅನೌನ್ಸ್ ಆಗಿವೆ ಹಾಗೂ ಯಾವ ಶೂಟಿಂಗ್ ನಡೆಯುತ್ತಿದೆ ಎಂಬುದನ್ನು ನೋಡಬೇಕು. ಈ ಹಿಂದೆ ನಾವು ಎಷ್ಟೋ ಕೇಸ್ಗಳಲ್ಲಿ ಸಂಧಾನ ಮಾಡಿಸಿದ್ದೇವೆ. ಆದರೆ ಇದು ಕೊಲೆ ಕೇಸ್ ಆದ್ದರಿಂದ ಸೂಕ್ಷ ವಿಚಾರ. ಎಲ್ಲವೂ ಕಾನೂನಿನ ಅಡಿಯಲ್ಲೇ ಆಗಬೇಕು. ನಾವು ಪಾರದರ್ಶಕತೆಯಿಂದ ಕೆಲಸ ಮಾಡುತ್ತೇವೆ’ ಎಂದು ಎನ್ಎಂ ಸುರೇಶ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.