ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಕೆಲ ಮುಸ್ಲಿಂ ಯುವಕರು ಓಡಾಟ ನಡೆಸಿದ್ದ ಬಗ್ಗೆ ವರದಿಯಾಗಿತ್ತು. ಅದೇ ರೀತಿ ಕೋಲಾರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ್ದರು. ಚಿತ್ರದುರ್ಗದಲ್ಲಿಯೂ ಈದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲಾಗಿತ್ತು. ಪ್ಯಾಲೆಸ್ತೀನ್ ಧ್ವಜ ಹಿಡಿಯುವುದನ್ನು ಸಚಿವ ಜಮೀರ್ ಅಹ್ಮದ್ ಖಾನ್ ಸಮರ್ಥನೆ ಮಾಡಿದ್ದಾರೆ.
ಕಲಬುರಗಿ, ಸೆಪ್ಟೆಂಬರ್ 19: ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆ ವಿಚಾರದಲ್ಲಿ ಬಿಜೆಪಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದಾರೆ. ಯಾರೇ ಬೆಂಕಿ ಹಚ್ಚುವ ಕೆಲಸ ಮಾಡಿದರೂ ಕ್ರಮಕೈಗೊಳ್ಳಬೇಕು. ರಾಜಕಾರಣಿಗಳು ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಜಾತಿ ಧರ್ಮ ಬಿಟ್ಟು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಅವರು ಹೇಳಿದರು.
ಪ್ಯಾಲೆಸ್ತೀನ್ಗೆ ಕೇಂದ್ರ ಸರ್ಕಾರವೇ ಬೆಂಬಲ ಸೂಚಿಸಿದೆ. ಹೀಗಿರುವಾಗ ಧ್ವಜ ಹಿಡಿದುಕೊಂಡು ಹೋದರೆ ತಪ್ಪೇನು? ಕೇಂದ್ರ ಸರ್ಕಾರ ಪ್ಯಾಲೆಸ್ತೀನ್ಗೆ ಬೆಂಬಲ ಘೋಷಣೆ ಮಾಡಿರುವ ಕಾರಣವೇ ಧ್ವಜ ಹಿಡಿದಿದ್ದಾರೆ, ಇಲ್ಲಾಂದರೆ ಹಿಡಿಯುತ್ತಿರಲಿಲ್ಲ. ಬೇರೆ ದೇಶದ ಬಗ್ಗೆ ಘೋಷಣೆ ಕೂಗಿದರೆ ಅದು ತಪ್ಪು. ಹಾಗೆ ಮಾಡಿದವರು ದೇಶದ್ರೋಹಿಗಳು. ಅಂಥವರನ್ನು ಗಲ್ಲಿಗೇರಿಸಬೇಕು. ಹಾಗೆಂದು ಧ್ವಜ ಹಿಡಿದರೆ ತಪ್ಪಿಲ್ಲ ಎಂದು ಜಮೀರ್ ಹೇಳಿದರು.
ಬಿಜೆಪಿಯವರು ಹಿಂದೂ ಮುಸ್ಲಿಂ ಜಗಳ ತಂದಿಟ್ಟು ಮತ ಕೇಳುತ್ತಾರೆ. ಆದರೆ, ನಾವು ಹಾಗಲ್ಲ. ಮಾಡಿದ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಯಾಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಪ್ಯಾಲೆಸ್ಟೈನ್ ಧ್ವಜ ಹಿಡಿದು ಬೈಕ್ನಲ್ಲಿ ಓಡಾಡಿದ ನಾಲ್ವರು ಅಪ್ರಾಪ್ತರು ವಶ
ಸಿಎಂ ರಾಜೀನಾಮೆ ನೀಡುತ್ತಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ವಿಜಯೇಂದ್ರರಂತಹ ನೂರು ಜನ ಬಂದರೂ ಏನೂ ಮಾಡಲು ಆಗಲ್ಲ. ಕುಮಾರಸ್ವಾಮಿ ಅವರಂಥ ಇನ್ನೂರು ಜನ ಬಂದರೂ ಏನೂ ಆಗಲ್ಲ. ಸಿದ್ದರಾಮಯ್ಯ ಹುಲಿ ಇದ್ದಂತೆ, ಅವರನ್ನು ಏನೂ ಮಾಡಲು ಆಗುವುದಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ