ಪರಿಷತ್ ಕದನದ ಅಂತಿಮ ಪರೀಕ್ಷೆ: ಅಡ್ಡಮತದಾನದ ಭೀತಿ, ರೆಸಾರ್ಟ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಶಾಸಕರು

Edited By:

Updated on: Jun 18, 2026 | 8:17 AM

ಇಂದು (ಜೂನ್ 18, 2026) ರಾಜ್ಯ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ತೀವ್ರ ಕುತೂಹಲದ ಮತದಾನ ನಡೆಯಲಿದೆ. ಅಡ್ಡಮತದಾನ ಮತ್ತು ಒಳಜಗಳದ ಭೀತಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ರೆಸಾರ್ಟ್ ರಾಜಕೀಯದ ಮೊರೆ ಹೋಗಿವೆ. ತಮ್ಮ 5ನೇ ಅಭ್ಯರ್ಥಿಯನ್ನು ಗೆಲ್ಲಿಸುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಸವಾಲಾಗಿದ್ದು, ಸಿಎಂ ಡಿಕೆ ಶಿವಕುಮಾರ್ ಶಾಸಕರಿಗೆ ಮತದಾನದ ತರಬೇತಿ ನೀಡಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಮತದಾನದತ್ತ ಇಡೀ ರಾಜ್ಯ ರಾಜಕಾರಣದ ಚಿತ್ತವಿದೆ.

ಬೆಂಗಳೂರು, ಜೂ.18 : ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಇಂದು (ಜೂನ್ 18, 2026) ಹೈವೋಲ್ಟೇಜ್ ವೋಟಿಂಗ್ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಧಾನಸೌಧದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಇಡೀ ರಾಜ್ಯ ರಾಜಕಾರಣದ ಚಿತ್ತ ಈಗ ಈ ಚುನಾವಣೆಯತ್ತ ನೆಟ್ಟಿದೆ. ಚುನಾವಣೆಯಲ್ಲಿ ಒಳಜಗಳ ಹಾಗೂ ಅಡ್ಡಮತದಾನ (Cross Voting) ಆಗುವ ಭೀತಿ ಎದುರಾಗಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್ ರಾಜಕೀಯದ ಮೊರೆ ಹೋಗಿವೆ. ರಾಮನಗರದ ವಂಡರ್‌ಲಾ ಹಾಗೂ ಬಿಡದಿ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಇಂದು ಬೆಳಗ್ಗೆಯೇ ಐದು ವಿಶೇಷ ಬಸ್‌ಗಳ ಮೂಲಕ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಜೆಡಿಎಸ್ ಶಾಸಕರು ಬೆಳಗ್ಗೆ 9 ಗಂಟೆಯ ಸುಮಾರಿಗೆ ಒಗ್ಗಟ್ಟು ಪ್ರದರ್ಶಿಸುತ್ತಾ ವಿಧಾನಸೌಧದತ್ತ ಪ್ರಯಾಣ ಬೆಳೆಸಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತನ್ನ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಅತ್ಯಂತ ಪ್ರತಿಷ್ಠೆಯ ಸವಾಲಾಗಿದೆ. ಹೀಗಾಗಿ, ಯಾವುದೇ ಒಂದು ಮತವೂ ಅಸಿಂಧು (Invalid) ಆಗದಂತೆ ತಡೆಯಲು ನಿನ್ನೆ ರಾತ್ರಿ ರೆಸಾರ್ಟ್‌ನಲ್ಲಿ ಸಿಎಂ ಡಿಕೆ ಶಿವಕುಮಾರ್​​​ ಶಾಸಕರಿಗೆ ವಿಶೇಷ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಿದ್ದಾರೆ. “ಇಂತಹ ಅಭ್ಯರ್ಥಿಗಳಿಗೆ ಇಂತಹ ಶಾಸಕರೇ ಮೊದಲ ಪ್ರಾಶಸ್ತ್ಯದ ಮತವನ್ನು ಹಾಕಬೇಕು” ಎಂದು ಸಿಎಂ ಕೋಟಾ ನಿಗದಿಪಡಿಸಿದ್ದು, ಹಿರಿಯ ನಾಯಕರು ಕೊನೆಯ ಕ್ಷಣದವರೆಗೂ ಸಂಖ್ಯಾಬಲದ ಕಸರತ್ತು ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us