ಬಾಗಲಕೋಟೆಯ ಇಲಾಳ ಮೇಳದ ರಾಜಕೀಯ ಭವಿಷ್ಯ: ರಾಜನೇ ಮರಳಿ ರಾಜನಾಗುವ ಯೋಗ
ಪ್ರತಿ ವರ್ಷ ಯುಗಾದಿ ಪಾಡ್ಯದಂದು ಬಾಗಲಕೋಟೆಯ ಗುಳೇದಗುಡ್ಡದ ಪಟ್ಟಣದ ಮಾರವಾಡಿ ಬಗೀಚ್ದಲ್ಲಿ ನಡೆಯುವ ಇಲಾಳ ಮೇಳದ ರಾಜಕೀಯ ಭವಿಷ್ಯವಾಣಿ ನುಡಿಯಲಾಗುತ್ತದೆ. ಅದರಂತೆ ಈ ಬಾರಿಯೂ ರಾಜಕೀಯ ಭವಿಷ್ಯ ನುಡಿದಿದ್ದು, ರಾಜ ಬಲಿಷ್ಠ ಆಗಿದ್ದಾನೆ, ಹೀಗಾಗಿ ರಾಜನೇ ಮರಳಿ ರಾಜನಾಗುವ ಯೋಗ ಇದೆ ಎಂದು ಹೇಳಲಾಗಿದೆ.
ಬಾಗಲಕೋಟೆ, ಏಪ್ರಿಲ್ 09: ರಾಜ ಬಲಿಷ್ಠ ಆಗಿದ್ದಾನೆ, ಹೀಗಾಗಿ ರಾಜನೇ ಮರಳಿ ರಾಜನಾಗುವ ಯೋಗ ಇದೆ ಎಂದು ಗುಳೇದಗುಡ್ಡದ (Guledgudda) ಪಟ್ಟಣದ ಮಾರವಾಡಿ ಬಗೀಚ್ದಲ್ಲಿ ನಡೆಯುವ ಇಲಾಳ ಮೇಳದ ರಾಜಕೀಯ ಭವಿಷ್ಯವಾಣಿಯಾಗಿದೆ (Political Bhavishyavani) . ಪ್ರತಿ ವರ್ಷ ಯುಗಾದಿ (Ugadi) ಪಾಡ್ಯದಂದು ಇಲಾಳ ಮೇಳದ ಭವಿಷ್ಯ ನುಡಿಯಲಾಗುತ್ತಿದೆ. ಇಲ್ಲಿ, ರಾಜಕೀಯ, ಮಳೆ ಮತ್ತು ಬೆಳೆ ಸೇರಿದಂತೆ ಹಲವು ವಿಚಾರವಾಗಿ ಭವಿಷ್ಯ ನುಡಿಯಲಾಗುತ್ತದೆ. ಈ ಬಾರಿ ಮಲ್ಲಿಕಾರ್ಜುನ ಗೊಬ್ಬಿ ರಾಜಕೀಯ ಭವಿಷ್ಯ ನುಡಿದಿದ್ದು, “ಈಗ ಇರುವ ರಾಜನೇ ಮತ್ತೆ ರಾಜ ಆಗುತ್ತಾನೆ. ರಾಜ, ಪ್ರಜೆಗಳು, ಮಂತ್ರಿಗಳು, ಸೈನ್ಯ ಬಲಿಷ್ಠವಾಗಿವೆ. ಅಧಿಕಾರ ಬೇಕು ಬೇಕು, ನಾವು ಆಳಬೇಕು ಅಂತ ಹೆಣಗಾಡುತ್ತಾರೆ” ಎಂದು ರಾಜಕೀಯ ಭವಿಷ್ಯ ನುಡಿಯಲಾಗಿದೆ.
ಇನ್ನು ಕೃಷಿ ಭವಿಷ್ಯ ನಡಿಯಲಾಗಿದ್ದು, ಎಷ್ಟೇ ಕಷ್ಟ ಕಾರ್ಪಣ್ಯ ಬಂದರೂ ಜೀವನ ಆನಂದವಾಗಿ ಸಾಗುತ್ತೆ. ದೇವರ ಸ್ಮರಣೆ, ದಾನ ಧರ್ಮ ಮಾಡಬೇಕು. ಈ ವರ್ಷ ಹೆಸರು, ಬಿಳಿಜೋಳ, ಗೋಧಿ, ಕಡಲೆ ಬಂಪರ್ ಬೆಳೆ ಇದೆ. ತೊಗರಿ, ಸಜ್ಜಿಗೆ ಕೀಟಬಾಧೆ ಜಾಸ್ತಿ ಆಗುತ್ತದೆ. ಎಳ್ಳು ತೇಜಿ ಆಗುತ್ತೆ. ಗುಳೇದಗುಡ್ಡ ಖಣ ಹಾಗೂ ಖಣದ ಸೀರೆ, ಇಳಕಲ್ ಸೀರೆ ವ್ಯಾಪಾರ ಸ್ವಲ್ಪ ಕಡಿಮೆ ಆಗುತ್ತದೆ. ಬಟ್ಟೆ ವ್ಯಾಪಾರ ಚನ್ನಾಗಿ ಆಗುತ್ತೆ ಎಂದು ಭವಿಷ್ಯ ನುಡಿಯಲಾಗಿದೆ.