ಐದು ವರ್ಷ ಅಧಿಕಾರ ಕೊಟ್ಟಿದ್ದಾರೆಂದ ಸಿದ್ದರಾಮಯ್ಯ: ಬಹಳ ಸಂತೋಷ, ಇಲ್ಲ ಅಂದಿದ್ದು ಯಾರು? ಡಿಕೆಶಿ ಮಾರ್ಮಿಕ ಮಾತು
ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ, ಸಿಎಂ ಆಗಿರುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಯೊಂದಿಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ತೀವ್ರಗೊಂಡಿದೆ. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ನೀಡಿದ ಮಾರ್ಮಿಕ ಹೇಳಿಕೆಗಳು ಹಾಗೂ ವಿರೋಧ ಪಕ್ಷದ ಟೀಕೆಗಳು ಈ ವಿವಾದಕ್ಕೆ ಮತ್ತಷ್ಟು ಇಂಬು ನೀಡಿವೆ. ಯಾರು ಏನಂದರು ಎಂಬ ವಿಡಿಯೋಗಳು ಇಲ್ಲಿವೆ ನೋಡಿ.
ಬೆಂಗಳೂರು, ನವೆಂಬರ್ 21: ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಎರಡೂವರೆ ವರ್ಷಗಳ ಅವಧಿ ಪೂರ್ಣಗೊಳ್ಳುತ್ತಿದ್ದಂತೆಯೇ, ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಅವರು ‘ಬಹಳ ಸಂತೋಷ. ಯಾರು ಇಲ್ಲ ಅಂದವರು. ನಾವು ಯಾರೂ ಅವರು ಸಿಎಂ ಆಗಿರಲ್ಲ ಅಂತ ಹೇಳಿಲ್ಲ, ಪ್ರಶ್ನೆ ಮಾಡಿಲ್ಲ. ಅವರಿಗೆ ಸಿಎಂ ಆಗಿ ನಮ್ಮ ಪಕ್ಷ ಜವಾಬ್ದಾರಿ ಕೊಟ್ಟಿದೆ. ನಾವೆಲ್ಲ ಜತೆಯಾಗಿ ಕೆಲಸ ಮಾಡುತ್ತೇವೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಮಾತನಾಡಿ, ‘ಸಿದ್ದರಾಮಯ್ಯ ಕೊಟ್ಟ ಮಾತನ್ನು ಎಂದಿಗೂ ತಪ್ಪಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ‘ಅಣ್ಣ ಶ್ರಮವಹಿಸಿದ್ದಾರೆ, ಅದೃಷ್ಟವಿದ್ದರೆ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಈ ಮಧ್ಯೆ, ‘ಯಾರು ಯಾರಿಗೆ ಯಾವ ಮಾತು ಕೊಟ್ಟಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಅವರೊಳಗಿನ ವಿಚಾರ’ ಎಂದು ಸಿದ್ದರಾಮಯ್ಯ ಬಣದ ಆಪ್ತ ಕೆಎನ್ ರಾಜಣ್ಣ ಹೇಳಿದ್ದಾರೆ.

