15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಅರ್ಜಿ ಹಾಕಲಾಗದೆ ಆಕಾಂಕ್ಷಿಗಳ ಪರದಾಟ
ಕರ್ನಾಟಕದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಯಾದಗಿರಿಯಲ್ಲಿ ತೀವ್ರ ಸರ್ವರ್ ಸಮಸ್ಯೆ ಎದುರಿಸುತ್ತಿದ್ದಾರೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಸಮೀಪಿಸುತ್ತಿದ್ದು, ಹಗಲು, ರಾತ್ರಿ ಸೈಬರ್ ಸೆಂಟರ್‌ಗಳ ಮುಂದೆ ಕಾದು ಕುಳಿತಿದ್ದಾರೆ. ತಾಂತ್ರಿಕ ಅಡಚಣೆಯಿಂದ ಸಾವಿರಾರು ಮಂದಿಯ ಭವಿಷ್ಯ ಅತಂತ್ರವಾಗಿದೆ.
ಯಾದಗಿರಿ, ಸೆಪ್ಟೆಂಬರ್ 04: ರಾಜ್ಯ ಸರ್ಕಾರ 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಭಾವಿ ಶಿಕ್ಷಕರಿಗೆ ತೀವ್ರ ಸರ್ವರ್ ಸಮಸ್ಯೆ ಎದುರಾಗಿದೆ. ಅರ್ಜಿ ಸಲ್ಲಿಕೆಯು ಸೆಪ್ಟೆಂಬರ್ 7ರಂದು ಕೊನೆಗೊಳ್ಳಲಿದ್ದು, ಯಾದಗಿರಿಯಂತಹ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಹಗಲು-ರಾತ್ರಿ ಸೈಬರ್ ಸೆಂಟರ್‌ಗಳ ಮುಂದೆ ಕಾದು ಕುಳಿತಿದ್ದಾರೆ.
ಯಾದಗಿರಿ ನಗರದ ಸೈಬರ್ ಸೆಂಟರ್‌ಗಳ ಮುಂದೆ ನೂರಾರು ಆಕಾಂಕ್ಷಿಗಳು ತಮ್ಮ ದಾಖಲೆಗಳೊಂದಿಗೆ ಜಮಾಯಿಸಿದ್ದು, ಸರ್ವರ್ ನಿಧಾನಗತಿ ಅಥವಾ ಸ್ಥಗಿತದಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 7,000 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಹಲವು ವರ್ಷಗಳಿಂದ ಈ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಸರ್ವರ್ ಸಮಸ್ಯೆಯು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಒಂದೇ ಒಂದು ಅರ್ಜಿ ಭರ್ತಿ ಮಾಡಲು ಸಹ ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ, ಅಭ್ಯರ್ಥಿಗಳು ರಾತ್ರಿ ವೇಳೆಯಲ್ಲಿ ಸರ್ವರ್ ಲೋಡ್ ಕಡಿಮೆ ಇರುವಾಗ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಪ್ರಯತ್ನವೂ ಹಲವು ದಿನಗಳಿಂದ ವಿಫಲವಾಗುತ್ತಿದ್ದು, ಸಾವಿರಾರು ಅಭ್ಯರ್ಥಿಗಳು ಮಾನಸಿಕ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಈ ತಾಂತ್ರಿಕ ದೋಷವನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಆಕಾಂಕ್ಷಿಗಳು ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
