Kho Kho World Cup 2025: ಖೋ- ಖೋ ವಿಶ್ವಕಪ್ ಗೆದ್ದ ಭಾರತ ಪುರುಷರ ತಂಡ
Kho Kho World Cup 2025: ಭಾರತ ಮತ್ತು ನೇಪಾಳ ಪುರುಷ ತಂಡಗಳ ನಡುವೆ ನಡೆದ ಖೋ-ಖೋ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ನೇಪಾಳವನ್ನು 54-36 ಅಂತರದಿಂದ ಸೋಲಿಸಿದ ಭಾರತ ತಂಡ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದಕ್ಕೂ ಮುನ್ನ ನಡೆದಿದ್ದ ಮಹಿಳೆಯರ ಫೈನಲ್ನಲ್ಲಿ ನೇಪಾಳವನ್ನು ಮಣಿಸುವಲ್ಲಿ ಭಾರತ ಯಶಸ್ವಿಯಾಗಿತ್ತು.
ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಖೋ- ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮುಖಾಂತರ ಭಾರತದ ಮಹಿಳಾ ಹಾಗೂ ಪುರುಷ ತಂಡಗಳು ಚಾಂಪಿಯನ್ ಪಟ್ಟವನ್ನು ಅಲಂಕರಿಸಿವೆ. ಇಂದು ಮೊದಲಿಗೆ ನಡೆದ ಮಹಿಳೆಯರ ಫೈನಲ್ ಪಂದ್ಯದಲ್ಲಿ ನೇಪಾಳ ಮಹಿಳಾ ತಂಡವನ್ನು ಮಣಿಸಿದ್ದ ಭಾರತ ಮಹಿಳಾ ತಂಡ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ತಂಡ ನೇಪಾಳ ಪುರುಷರ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ವಾಸ್ತವವಾಗಿ ಈ ಟೂರ್ನಿಯ ಮೊದಲ ಪಂದ್ಯವೂ ಈ ಎರಡು ತಂಡಗಳ ನಡುವೆ ನಡೆದಿತ್ತು. ಆಗಲೂ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಇದೀಗ ನಡೆದ ಫೈನಲ್ನಲ್ಲಿಯೂ ಭಾರತ ತಂಡ ನೇಪಾಳವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ.
ಮೊದಲನೇ ಟರ್ನ್ನಲ್ಲಿ ದಾಳಿ ನಡೆಸಿದ ಭಾರತ ತಂಡ ಒಟ್ಟು 26 ಅಂಕ ಕಲೆಹಾಕಿತು. ಇತ್ತ ನೇಪಾಳ ತಂಡ 2 ನೇ ಟರ್ನ್ನಲ್ಲಿ 18 ಅಂಕಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಕಾರಣದಿಂದಾಗಿ ಭಾರತ ತಂಡವು 8 ಅಂಕಗಳ ಮುನ್ನಡೆ ಗಳಿಸಿತು. ಇದಾದ ನಂತರ 3ನೇ ಟರ್ನ್ನಲ್ಲಿ ಟೀಂ ಇಂಡಿಯಾ 54 ಅಂಕಗಳನ್ನು ಮುಟ್ಟಿ 26 ಅಂಕಗಳ ಮುನ್ನಡೆ ಸಾಧಿಸಿತು. ಕೊನೆಯ ಟರ್ನ್ನಲ್ಲಿ ನೇಪಾಳ 8 ಅಂಕಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ಅಂತಿಮವಾಗಿ ಭಾರತ ತಂಡವು ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿತು.
ಭಾರತ ಪುರುಷರ ತಂಡ ಅಜೇಯ
ಪುರುಷರ ಖೋ-ಖೋ ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಈ ಅವಧಿಯಲ್ಲಿ ಭಾರತದ ಪುರುಷರ ತಂಡ ನೇಪಾಳ, ಪೆರು, ಬ್ರೆಜಿಲ್ ಮತ್ತು ಭೂತಾನ್ನೊಂದಿಗೆ ಎ ಗುಂಪಿನಲ್ಲಿತ್ತು. ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಪ್ರತಿ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಭಾರತ ತಂಡ ನೇಪಾಳವನ್ನು 42-37 ಅಂಕಗಳಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇದಾದ ಬಳಿಕ ಬ್ರೆಜಿಲ್ ತಂಡವನ್ನು 64-34 ಅಂಕಗಳಿಂದ ಸೋಲಿಸಿದ್ದರೆ, ಪೆರು ವಿರುದ್ಧ 70-38 ಅಂತರದ ಗೆಲುವು ಸಾಧಿಸಿತ್ತು. ಆ ಬಳಿಕ ಭೂತಾನ್ ತಂಡವನ್ನು 71-34ರಲ್ಲಿ ಮಣಿಸಿತ್ತು.
ನಾಕೌಟ್ ಪಂದ್ಯಗಳಲ್ಲಿಯೂ ಏಕಪಕ್ಷೀಯವಾಗಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ, ಕ್ವಾರ್ಟರ್ ಫೈನಲ್ನಲ್ಲಿ ಶ್ರೀಲಂಕಾವನ್ನು 100-40 ಅಂತರದಿಂದ ಸೋಲಿಸಿದರೆ, ಇದಾದ ಬಳಿಕ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 60-18 ಅಂತರದಲ್ಲಿ ಜಯ ಸಾಧಿಸಿತ್ತು. ಈ ಪ್ರಬಲ ಪ್ರದರ್ಶನದಿಂದಾಗಿ ಭಾರತ ಪುರುಷರ ತಂಡ ಫೈನಲ್ಗೆ ಲಗ್ಗೆ ಇಟ್ಟಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ