‘ಗರಿ ಬಾಡಿಗೆ ತಂದಿದ್ದು, ಯಾವುದೇ ಪಕ್ಷಿಗಳಿಗೆ ಹಾನಿ ಮಾಡಿಲ್ಲ’; ಕಿಶನ್ ಸ್ಪಷ್ಟನೆ
ನವಿಲುಗರಿಗಳನ್ನು ಬಳಸಿಕೊಂಡು ರೀಲ್ಸ್ ಹಾಗೂ ನೃತ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಖ್ಯಾತ ನೃತ್ಯಗಾರ ಹಾಗೂ ಇನ್ಫ್ಲುಯೆನ್ಸರ್ ಕಿಶನ್ ಬಿಳಗಲಿ ಅವರು, ವಿವಾದದ ಬೆನ್ನಲ್ಲೇ ಅಧಿಕೃತ ಸ್ಪಷ್ಟನೆ ನೀಡಿದ್ದು ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
ನವಿಲುಗರಿ ಬಳಸಿ ಕಿಶನ್ ಮಾಡಿದ್ದ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಘಟನೆಗೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.
‘ಸಾಮಾನ್ಯವಾಗಿ ಕೃಷ್ಣ ಜನ್ಮಾಷ್ಟಮಿ ಹಾಗೂ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಿಗೆ ಬಳಸುವಂತೆ, ನಾವೂ ಕೂಡ ವಿಡಿಯೋ ಕಾನ್ಸೆಪ್ಟ್‌ಗಾಗಿ ಅಂಗಡಿಯೊಂದರಿಂದ ಈ ನವಿಲುಗರಿಗಳನ್ನು ಬಾಡಿಗೆಗೆ ಪಡೆದುಕೊಂಡು ಬಂದಿದ್ದೆವು. ಯಾವುದೇ ಪಕ್ಷಿಗೆ ವೈಯಕ್ತಿಕವಾಗಿ ಹಾನಿ ಮಾಡಿ ಇದನ್ನು ತಂದಿರಲಿಲ್ಲ’ ಎಂದು ಕಿಶನ್ ತಿಳಿಸಿದ್ದಾರೆ.
ನವಿಲುಗರಿಗಳನ್ನು ಈ ರೀತಿ ಕಮರ್ಷಿಯಲ್ ಆಗಿ ಬಾಡಿಗೆಗೆ ನೀಡುವುದು ಅಥವಾ ಬಳಸುವುದು ಅಪರಾಧ ಎಂಬ ಕಾನೂನಿನ ಅರಿವು ನಮಗಾಗಲಿ, ನಮ್ಮ ಇಡೀ ತಂಡಕ್ಕಾಗಲಿ ಇರಲಿಲ್ಲ. ನಮಗೆ ನೋಟಿಸ್ ಬಂದ ತಕ್ಷಣ ಅಧಿಕಾರಿಗಳು ಇದರ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಎಂಬ ಜವಾಬ್ದಾರಿಯಿಂದ ನಾವು ತಕ್ಷಣವೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ’ ಎಂದಿದ್ದಾರೆ. ‘ನಮ್ಮ ನಡೆ ಯಾರಿಗಾದರೂ ಬೇಸರ ತಂದಿದ್ದರೆ ನಾನು ನಿಜಕ್ಕೂ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ. (Source: Kishan Bilagali)
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.