ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? ಕೆಎಂಎಫ್ ಅಧ್ಯಕ್ಷ ಹೇಳಿದ್ದಿಷ್ಟು..!
ಕಳೆದ ಜೂನ್ 25ರಂದು ನಂದಿನಿ ಹಾಲಿನ ಬ್ಯಾಕೆಟ್ 50 ML ಪ್ರಮಾಣಿ ಹೆಚ್ಚಿಸಿ ದರ ನಿಗದಿ ಮಾಡಲಾಗಿತ್ತು. ಈ ಬಾರಿ ನಂದಿನ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ದರ ಏರಿಕೆ ಬಗ್ಗೆ ಈಗಾಗಲೇ ಹಾಲು ಒಕ್ಕೂಟಗಳು ಕೆಎಂಎಫ್ ಹಾಗೂ ಸಿಎಂ ಮುಂದೆ ಪ್ರಸ್ತಾವನೆ ಇಟ್ಟಿವೆ. ಇನ್ನು ಈ ಬಗ್ಗೆ ಸ್ವತಃ ಕೆಎಂಎಫ್ ಅಧ್ಯಕ್ಷ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 19): ಕರ್ನಾಟಕದಲ್ಲಿ ಮತ್ತೆ ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಇದಕ್ಕೆ ಪೂರಕವೆಂಬಂತೆ ರಾಮನಗರ ಜಿಲ್ಲೆಯ ಮಾಗಡಿಯ ಹೊಸಪೇಟೆ ವೃತ್ತ ಬಳಿ ನಡೆದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ವೇದಿಕೆಯಲ್ಲೇ ಘೋಷಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ರಾಜ್ಯದ ಜನರಿಗೆ ಶೀಘ್ರವೇ ನಂದಿನಿ ಹಾಲಿನ ದರ ಏರಿಕೆ ಬಿಸಿ ತಟ್ಟಲಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಳಕ್ಕೆ ಹಾಲು ಒಕ್ಕೂಟಗಳು ಬಿಗಿಪಟ್ಟು ಹಿಡಿದಿವೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಪ್ರತಿಕ್ರಿಯಿಸಿದ್ದು, ನಂದಿನಿ ಹಾಲಿನ ದರ ಹೆಚ್ಚಳಕ್ಕೆ 27 ಲಕ್ಷ ಹಾಲು ಉತ್ಪಾದಕರ ಬೇಡಿಕೆ ಇದೆ. ರೈತರ ಬೇಡಿಕೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿಟ್ಟಿದ್ದೇವೆ. ಸಭೆ ಮಾಡಿ ತೀರ್ಮಾನ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೆಎಂಎಫ್ ಹಾಗೂ ಎಲ್ಲ ಒಕ್ಕೂಟದ ಅಧ್ಯಕ್ಷರ ಜೊತೆ ಚರ್ಚಿಸಲಿದ್ದಾರೆ. ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ತೀರ್ಮಾನ ಅಂತಿಮವಾಗಿರುತ್ತೆ ಎಂದು ಸ್ಪಷ್ಟಪಡಿಸಿದರು.
ಕಳೆದ ಬಾರಿ 50 ML ಹೆಚ್ಚಳ ಮಾಡಿ, ಅದರ ದರ ತೆಗೆದುಕೊಂಡಿದ್ದೇವೆ. 50 ML ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗಿಲ್ಲ. ಸಾಧಕ ಬಾಧಕಗಳನ್ನ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡ್ತೀವಿ. ರೈತರ ಬೇಡಿಕೆ ಪ್ರತಿ ಲೀಟರ್ಗೆ 5 ರೂ. ದರ ಇದೆ. ರೈತರ ದರವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಇಡುತ್ತೇವೆ ಎಂದು ತಿಳಿಸಿದರು. ಈ ಮೂಲಕ ನಂದಿನ ಹಾಲಿನ ದರ ಏರಿಕೆಯಾಗುವುದನ್ನು ಖಚಿತಪಡಿಸಿದರು.