ಸಿಎಂ ಸಿದ್ದರಾಮಯ್ಯ ಗಟ್ಟಿಯಾಗಿ ನಿಲ್ಲಬೇಕು, ಆದರೆ ಅವರು ನಿಲ್ಲುತ್ತಿಲ್ಲ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಇರುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೆ.ಎನ್. ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂತಹ ವಿಚಾರಗಳಲ್ಲಿ ದೃಢ ನಿಲುವು ತಾಳದಿರುವುದು ಬೇಸರ ತರಿಸಿದೆ. ಸಿದ್ದರಾಮಯ್ಯನವರ ಅಸಹಾಯಕ ಪರಿಸ್ಥಿತಿಗೆ ಕಾರಣರಾದವರು ಯಾರೆಂದು ರಾಜಣ್ಣ ಪ್ರಶ್ನಿಸಿದ್ದಾರೆ. ಇದೀಗ ಈ ಹೇಳಿಕೆ ಕಾಂಗ್ರಸ್ನಲ್ಲಿ ಭಾರೀ ಸಂಚಲ ಮೂಡಿಸಿದೆ. ಸಿದ್ಧರಾಮಯ್ಯ ಅವರನ್ನು ಪಕ್ಷದಲ್ಲಿ ಯಾರಾದರೂ ಕಟ್ಟಿ ಹಾಕಿದ್ದಾರಾ? ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಏ,17: ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರು ಪಕ್ಷದಲ್ಲಿ ನಿಷ್ಠೆಯಿಂದ ಇರುವವರನ್ನು ಗುರಿಯಾಗಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ಪಕ್ಷ ನಿಷ್ಠರ ವಿರುದ್ಧ ಹುನ್ನಾರ ನಡೆಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಜಮೀರ್ ಅಹಮದ್ ಮತ್ತು ಅವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದರು. ಹಿಂದೆ ವಾಲ್ಮೀಕಿ ಸಮುದಾಯವನ್ನು ಗುರಿಯಾಗಿಸಲಾಗಿತ್ತು, ಈಗ ಅಲ್ಪಸಂಖ್ಯಾತ ಸಮುದಾಯದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧವಾಗಿ ತಾವು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.ಪಕ್ಷಕ್ಕೆ ನಿಷ್ಠರಾಗಿರುವ, ಕಾಂಗ್ರೆಸ್ ಪಕ್ಷ ಬೆಳೆಯಬೇಕು, ಮತ್ತು ಅದರ ಮೂಲಕ ಬಡವರಿಗೆ ಅನುಕೂಲವಾಗಬೇಕು ಎಂದು ನಿರೀಕ್ಷಿಸುವವರ ಮೇಲೆ ಪಕ್ಷದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರಗಳನ್ನು ನಡೆಸುತ್ತಿವೆ ಎಂದು ರಾಜಣ್ಣ ಸ್ಪಷ್ಟಪಡಿಸಿದರು. ಇಂತಹ ಸನ್ನಿವೇಶಗಳು ಬಂದಾಗ ಮುಖ್ಯಮಂತ್ರಿಗಳು ಗಟ್ಟಿಯಾಗಿ ನಿಲ್ಲಬೇಕು, ಆದರೆ ಅವರು ನಿಲ್ಲುತ್ತಿಲ್ಲ ಎಂಬುದು ತಮಗೆ ಬೇಸರ ತರಿಸಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಂದ ಅಂತಹ ದೃಢ ನಿಲುವನ್ನು ರಾಜಣ್ಣ ನಿರೀಕ್ಷಿಸಿದ್ದರು. “ಸಿದ್ದರಾಮಯ್ಯನವರು ಏನಾದ್ರೂ ಕಟ್ಟ ಹಾಕಿದ್ದಾರಾ? ನಾವು ಸಿದ್ದರಾಮಯ್ಯನವರಿಂದ ಈ ರೀತಿ ಅಸಹಾಯಕ ಪರಿಸ್ಥಿತಿಯನ್ನು ನಿರೀಕ್ಷಿಸಿರಲಿಲ್ಲ” ಎಂದು ಅವರು ಪ್ರಶ್ನಿಸಿದರು. ಎಲ್ಲಾ ಪಕ್ಷಗಳಲ್ಲೂ ಪಟ್ಟಭದ್ರ ಹಿತಾಸಕ್ತಿಗಳು ಇರುತ್ತವೆ, ಕಾಂಗ್ರೆಸ್‌ನಲ್ಲೂ ಇವೆ ಎಂದು ಅವರು ಒಪ್ಪಿಕೊಂಡರು. ಆದರೆ ಸಿದ್ದರಾಮಯ್ಯನವರನ್ನು ಅಸಹಾಯಕರನ್ನಾಗಿಸಿದ ಆ ಶಕ್ತಿ ಅಥವಾ ವ್ಯಕ್ತಿ ಯಾರೆಂದು ನೇರವಾಗಿ ಹೇಳಲು ಅವರು ನಿರಾಕರಿಸಿದರು, “ನೀವೇ ಅರ್ಥ ಮಾಡಿಕೊಳ್ಳಿ” ಎಂದು ಹೇಳಿದರು. ಸಿದ್ದರಾಮಯ್ಯನವರು ತಮ್ಮ ಮೌನ ಮುರಿಯಬೇಕು ಎಂದು ಒತ್ತಾಯಿಸಿದ ರಾಜಣ್ಣ, ಮುಖ್ಯಮಂತ್ರಿಗಳ ಮೇಲೆ ಯಾವ ರೀತಿಯ ನಿರ್ಬಂಧಗಳು ಅಥವಾ ಕಂಪಲ್ಷನ್ಸ್ ಇವೆಯೋ ತಮಗೆ ತಿಳಿದಿಲ್ಲ ಎಂದರು. ಯಾವ ಒತ್ತಡದಿಂದ ಅವರು ಇಂತಹ ತಟಸ್ಥ ಧೋರಣೆ ತಳೆದಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ರಕ್ಷಿಸಲು ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು ಎಂಬುದು ರಾಜಣ್ಣ ಅವರ ಆಶಯವಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

