ಕ್ಷೇತ್ರದ ಸಮಸ್ಯೆ ಮುಖ್ಯಮಂತ್ರಿಗಳಿಗೆ ವಿವರಿಸಲು ಪಂಚೆಯುಟ್ಟು ಬರಿಗಾಲಲ್ಲಿ ಓಡೋಡಿ ಬಂದರು ಮಾಜಿ ಸ್ಪೀಕರ್ ರಮೇಶ ಕುಮಾರ

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮುದವಾಡಿ ಹೆಸರಿನ ಗ್ರಾಮದ ಬಳಿ ಮುಖ್ಯಮಂತ್ರಿಗಳನ್ನು ಭೇಟಿಯಾದ ರಮೇಶ ಕುಮಾರ್ ಅವರು, ಕ್ಷೇತ್ರದಲ್ಲಿ ಮಳೆಯಿಂದ ಆಗಿರುವ ಹಾನಿ ಮತ್ತು ಎದುರಾಗಿರುವ ಸಮಸ್ಯೆಗಳನ್ನು ಮೌಖಿಕವಾಗಿ ವಿವರಿಸಿದರು.

TV9kannada Web Team

| Edited By: Arun Belly

Nov 23, 2021 | 1:44 AM

ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಅವರು ನೇರ, ನಿಷ್ಠುರ ಸ್ವಭಾವಕ್ಕೆ ಹೆಸರಾದಂತೆಯೇ ಸರಳತೆಗೂ ಗುರುತಿಸಿಕೊಂಡವರು. ಅದನ್ನು ಅವರು ಸೋಮವಾರದಂದು ಮತ್ತೊಮ್ಮೆ ಪ್ರದರ್ಶಿಸಿದರು. ಕಳೆದೊಂದು ತಿಂಗಳಿಂದ ರಾಜ್ಯದಲ್ಲಿ ಮಳೆ ಸೃಷ್ಟಿಸಿರುವ ಅವಾಂತರಗಳು ಒಂದೆರಡಲ್ಲ. ಕೆಲವೆಡೆ ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಪ್ರವಾಹದಂಥ ಸ್ಥಿತಿ ನಿರ್ಮಾಣವಾಗಿದೆ. ಬೇರೆ ಕಡೆ ಕೆರೆಗಳು ತುಂಬಿ ಊರೊಳಗೆ ನೀರು ನುಗ್ಗಿದೆ. ಬೆಂಗಳೂರಿನ ರಸ್ತೆಗಳಲ್ಲಿ ಬರೀ ಪ್ರಾಣಘಾತುಕ ಗುಂಡಿಗಳು. ರಾಜ್ಯದ ಎಲ್ಲ ಭಾಗಗಳಲ್ಲಿ ಜನ ಕಂಗಾಲಾಗಿ ತಮ್ಮ ಪ್ರತಿನಿಧಿಗಳ ಕದ ತಟ್ಟುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಸೋಮವಾರ ಬೊಮ್ಮಾಯಿ ಅವರು ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದರು. ಹಲವಾರು ಹಳ್ಳಿಗಳ ಜನರಿಂದ ಅಹಲುವಾಲುಗಳನ್ನು ಸ್ವೀಕರಿಸಿದರು. ಮುಖ್ಯಮಂತ್ರಿಗಳು ಆಗಮಿಸುತ್ತಿದ್ದ ವಿಷಯ ರಮೇಶ ಕುಮಾರ್ ಅವರಿಗೆ ಗೊತ್ತಾಗಿತ್ತು.

ಹಾಗಾಗಿ ಅವರನ್ನು ಭೇಟಿಯಾಗಿ ಮಳೆಯಿಂದ ತಮ್ಮ ಕ್ಷೇತ್ರಕ್ಕೆ ಆಗಿರುವ ಸಮಸ್ಯೆಗಳನ್ನು ಅವರಿಗೆ ತಿಳಿಸಲು ಪಂಚೆಯುಟ್ಟೇ, ನೀರು ಹರಿಯುತ್ತಿದ್ದ ರಸ್ತೆಯಲ್ಲಿ ಥೇಟ್ ಆ ಭಾಗದ ರೈತರ ಹಾಗೆ, ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ ಬರಿಗಾಲಲ್ಲಿ ನಡೆದು ಬಂದರು.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮುದವಾಡಿ ಹೆಸರಿನ ಗ್ರಾಮದ ಬಳಿ ಮುಖ್ಯಮಂತ್ರಿಗಳನ್ನು ಭೇಟಿಯಾದ ರಮೇಶ ಕುಮಾರ್ ಅವರು, ಕ್ಷೇತ್ರದಲ್ಲಿ ಮಳೆಯಿಂದ ಆಗಿರುವ ಹಾನಿ ಮತ್ತು ಎದುರಾಗಿರುವ ಸಮಸ್ಯೆಗಳನ್ನು ಮೌಖಿಕವಾಗಿ ವಿವರಿಸಿದರು. ಶ್ರೀನಿವಾಸಪುರದ ಶಾಸಕ ಮತ್ತೊಮ್ಮೆ ತಮ್ಮ ಸರಳತೆಯಿಂದ ಜನರ ಮನ ಗೆದ್ದರು.

ಇದನ್ನೂ ಓದಿ:   ‘ರಶ್ಮಿಕಾ ಊಟ’ ಮಾರಾಟಕ್ಕಿದೆ; ಇದನ್ನು ತಿನ್ನೋದು ಹೇಗೆ? ವಿಡಿಯೋ ಸಮೇತ ವಿವರಿಸಿದ ನಟಿ

Follow us on

Click on your DTH Provider to Add TV9 Kannada