ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಿಲು ಜನರಿಗೆ ಹೊಸ ಸೂರು, ಎಷ್ಟು ಮೊತ್ತದ್ದು ಗೊತ್ತಾ?

Updated on: Dec 29, 2025 | 7:56 PM

ಕೋಗಿಲು ಲೇಔಟ್​ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕೇರಳ ಸಿಎಂ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆಸಿ ವೇಣುಗೋಪಾಲ್ ಅವರು ಸಹ ಕೋಗಿಲು ಜನರ ಕೂಗಿಗೆ ಕಿವಿಯಾಗಿದ್ದು, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ತಮ್ಮದೇ ಪಕ್ಷದ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು (ಡಿಸೆಂಬರ್ 29) ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದು, ಮನೆ ಕಳೆದುಕೊಂಡವರಿಗೆ ಹೊಸ ಸೂರು ಒದಗಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ.

ಬೆಂಗಳೂರು, ಡಿಸೆಂಬರ್ 29): ಕೋಗಿಲು ಲೇಔಟ್​ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣ (Kogilu house demolitions) ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕೇರಳ ಸಿಎಂ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆಸಿ ವೇಣುಗೋಪಾಲ್ ಅವರು ಸಹ ಕೋಗಿಲು ಜನರ ಕೂಗಿಗೆ ಕಿವಿಯಾಗಿದ್ದು, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ತಮ್ಮದೇ ಪಕ್ಷದ ಸಿದ್ದರಾಮಯ್ಯ (Siddaramaiah) ಸರ್ಕಾರಕ್ಕೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು (ಡಿಸೆಂಬರ್ 29) ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದು, ಮನೆ ಕಳೆದುಕೊಂಡವರಿಗೆ ಹೊಸ ಸೂರು ಒದಗಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಡಿಸೆಂಬರ್ 20ರಂದು ಸುಮಾರು 167 ಮನೆಗಳನ್ನು ತೆರವುಗೊಳಿಸಲಾಗಿತ್ತು. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ್ದರು.
ನಿನ್ನೆ ಸ್ಥಳಕ್ಕೆ ಸಚಿವ ಜಮೀರ್‌, ಇಂದು ಡಿಸಿಎಂ ಭೇಟಿ ನೀಡಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅರ್ಹರಿಗೆ 7 ಕಿ.ಮೀ ಅಂತರದಲ್ಲಿ 11.2 ಲಕ್ಷ ರೂಪಾಯಿ ವೆಚ್ಚದಲ್ಲಿ ತಲಾ ಒಂದು ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಘೋಷಿಸಿದರು.

ನಾಳೆ, ನಾಡಿದ್ದು ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಲಾಗಿದ್ದು, ಡಿಸಿ, ಪಾಲಿಕೆ ಅಧಿಕಾರಿಗಳು ನೀಡುವ ಪಟ್ಟಿ ಆಧರಿಸಿ ಮನೆ ಹಂಚಿಕೆ ಮಾಡಲಾಗುವುದು. ಬೈಯಪ್ಪನಹಳ್ಳಿ ಸರ್ವೆ ನಂಬರ್‌ 23ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಿರುವ ಮನೆಗಳನ್ನು ಹೊಸ ವರ್ಷದ ಆರಂಭದ ದಿನ ಮನೆ ನೀಡಲು ಸಚಿವ ಜಮೀರ್ ಅಹಮ್ಮದ್ ಖಾನ್ ಒಪ್ಪಿದ್ದಾರೆ ಎಂದರು.

ಇದರಲ್ಲಿ ವಿಶೇಷ ಆಸಕ್ತಿ ಇಲ್ಲ. ಕಮ್ಯೂನಿಸ್ಟ್‌ನವರು ಆಸಕ್ತಿ ವಹಿಸಿದ್ದಾರೆ. ಕೇರಳದಲ್ಲಿ ಚುನಾವಣೆ ಬರುತ್ತಿದೆ. ಹೀಗಾಗಿ ಆಸಕ್ತಿ ವಹಿಸಿದ್ದಾರೆ. ಮನುಷ್ಯತ್ವ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಇನ್ಮುಂದೆ ಈ ರೀತಿ ಯಾರೂ ಒತ್ತುವರಿ ಮಾಡದಂತೆ ಸೂಚಿಸಿದ್ದೇವೆ. ತಹಶೀಲ್ದಾರ್‌ ಹಾಗೂ ವಿಎಗೆ ಗೊತ್ತಿಲ್ಲದೇ ಒತ್ತುವರಿ ಸಾಧ್ಯವೇ ಇಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ