ದುರಂತ್ ಎಕ್ಸ್​ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!

Edited By:

Updated on: Jul 05, 2026 | 4:06 PM

ಮುಖ್ಯಾಂಶಗಳು

  • ದುರಂತ್ ಎಕ್ಸ್​ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ
  • ಕೋಲಾರ ಜಿಲ್ಲೆಯ ಬಂಗಾರಪೇಟೆ ಪ್ಲಾಟ್​ಫಾರ್ಮ್​​ನಲ್ಲಿ ಪರಿಶೀಲನೆ
  • ಓರ್ವ ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ

ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ದುರಂತ್​ ಎಕ್ಸ್‌ಪ್ರೆಸ್‌ಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ರೈಲನ್ನು ನಿಲ್ಲಿಸಿ ತೀವ್ರ ಪರಿಶೀಲನೆ ನಡೆಸಲಾಯಿತು. ರೈಲ್ವೆ, ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಸಂಪೂರ್ಣ ತಪಾಸಣೆ ಮಾಡಿದರು. ಈ ಸಂಬಂಧ ಬಾಂಬ್ ಬೆದರಿಕೆ ಕರೆ ಮಾಡಿದ್ದ ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋಲರ, ಜುಲೈ 05: ಕೋಲ್ಕತ್ತಾದ ಹೌರಾ ಜಂಕ್ಷನ್‌ನಿಂದ ಬೆಂಗಳೂರಿನ ಎಸ್‌ಎಂವಿಟಿಗೆ ಆಗಮಿಸುತ್ತಿದ್ದ ದುರಂತ್ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಯಿಂದ ಬಾಂಬ್ ಬೆದರಿಕೆ ಕರೆ ಬಂದಿದೆ. ಹೀಗಾಗಿ ತಕ್ಷಣ ಅಲರ್ಟ್ ಆದ ರೈಲ್ವೆ ಪೊಲೀಸರು ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ಜಂಕ್ಷನ್‌ನಲ್ಲಿ ರೈಲು ನಿಲ್ಲಿಸಿ ಪರಿಶೀಲನೆ ಮಾಡಿದರು. ಈ ವೇಳೆ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಿ ಬಂಗಾರಪೇಟೆ ಪ್ಲಾಟ್​ಫಾರ್ಮ್ ನಂ.1ರಲ್ಲಿ ತಪಾಸಣೆ ಮಾಡಿದರು. ಇನ್ನು ದುರಂತ್ ಎಕ್ಸ್‌ಪ್ರೆಸ್ ರೈಲಿಗೆ ಬಾಂಬ್​ ಬೆದರಿಕೆ ಕರೆ ಮಾಡಿದ್ದ ಓರ್ವ ಯುವಕನನ್ನು ಜಿಲ್ಲೆಯ ಬಂಗಾರಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿರುವ ಯುವಕನನ್ನು ಪಶ್ಚಿಮ ಬಂಗಾಳ ಮೂಲದ ಶಶಾಂಕ್​ ದೊಹ್ಲ ಎಂದು ಗುರುತಿಸಲಾಗಿದೆ. ಈ ಶಶಾಂಕ್​ ದೊಹ್ಲ ರೈಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿಯಾಗಿದ್ದು, ಪ್ರಯಾಣಿಕ ಪ್ರಸಾದ್ ಎಂಬುವವರೊಂದಿಗೆ ಜಗಳ ಮಾಡಿಕೊಂಡು ಬಳಿಕ ರೈಲಿನಿಂದ ಇಳಿದಿದ್ದಾರೆ. ನಂತರ ಶಶಾಂಕ್​ ದೊಹ್ಲ ಫೋಟೋ ಹಾಕಿ ಈತ ರೈಲಿನಲ್ಲಿ ಬಾಂಬ್ ಇಟ್ಟಿರುವ ಕುರಿತು ಪ್ರಯಾಣಿಕ ಪ್ರಸಾದ್ ದೂರು ನೀಡಿದ್ದರು. ಹೀಗಾಗಿ ಸದ್ಯ ಶಶಾಂಕ್​​ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದು, ಆತ ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Published on: Jul 05, 2026 03:53 PM
Follow Us