ಎರಡೇ ಎರಡು ಲೈಟ್ ಇರುವ ತಗಡಿನ ಮನೆಗೆ ಲಕ್ಷ ಕರೆಂಟ್ ಬಿಲ್; ಹಣ ಕಟ್ಟೊದು ಹೇಗೆ ಅಂತ ವೃದ್ಧೆ ಕಣ್ಣೀರು

|

Updated on: Jun 22, 2023 | 10:35 AM

ರಾಜ್ಯ ಸರ್ಕಾರದಿಂದ ಉಚಿತ ವಿದ್ಯುತ್ ಘೋಷಣೆ ಮಧ್ಯೆಯೇ ಜೆಸ್ಕಾಂ ಅಜ್ಜಿಯೊಬ್ಬರಿಗೆ ಬಿಗ್​ ಶಾಕ್​ ಕೊಟ್ಟಿದೆ. ಕೊಪ್ಪಳದ ಭಾಗ್ಯನಗರದಲ್ಲಿ ಅಜ್ಜಿಯೊಬ್ಬರ ಮನೆಯಲ್ಲಿ ಎರಡೇ ಎರಡು ಲೈಟ್ ಉರಿಸಿದ್ರೂ ಲಕ್ಷ ಗಟ್ಟಲೆ ಬಿಲ್ ಬಂದಿದೆ. ಗಿರಿಜಮ್ಮ ಎಂಬುವವರ ಮನೆಗೆ ಬರೋಬ್ಬರಿ 1,03,315 ರೂ ಬಿಲ್ ನೀಡಿದ್ದು, ವಿದ್ಯುತ್ ಬಿಲ್ ನೋಡಿ ವೃದ್ದೆ ಕಣ್ಣೀರು..

ಕೊಪ್ಪಳ: ರಾಜ್ಯ ಸರ್ಕಾರದಿಂದ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದ್ದು ಮತ್ತೊಂದೆಡೆ ಡಬಲ್ ವಿದ್ಯುತ್ ದರ ನೋಡಿ ಜನ ಶಾಕ್ ಆಗ್ತಿದ್ದಾರೆ. ಆದ್ರೆ ಕೊಪ್ಪಳದಲ್ಲಿ ವೃದ್ಧೆಯೊಬ್ಬರಿಗೆ ಲಕ್ಷ ಕರೆಂಟ್ ಬಿಲ್ ಬಂದಿದೆ. ಕರೆಂಟ್ ಬಿಲ್ ನೋಡಿ ಅಜ್ಜಿ ಮತ್ತು ಅವರ ಮಗ ಶಾಕ್ ಆಗಿದ್ದು ತುತ್ತು ಅನ್ನಕ್ಕೂ ಪರದಾಡುವ ನಮ್ಮೊಂದಿಗೆ ಇದೆಂತ ಆಟ ಎಂದು ಅಜ್ಜಿ ಕಣ್ಣೀರಿಟ್ಟಿದ್ದಾರೆ.

ಕೊಪ್ಪಳದ ಭಾಗ್ಯ ನಗರದಲ್ಲಿ ಗಿರಿಜಮ್ಮ ಎಂಬುವವರಿಗೆ ಜೆಸ್ಕಾಂನಿಂದ ಒಂದು ಲಕ್ಷದ ಕರೆಂಟ್ ಬಿಲ್ ಬಂದಿದೆ. ಪ್ರತಿ ತಿಂಗಳು 70 ರಿಂದ 80 ರೂ ಬರ್ತಿದ್ದ ಬಿಲ್ ಈಗ ದಿಢೀರನೆ 1 ಲಕ್ಷ ಬಂದಿದ್ದು ಆತಂಕಕ್ಕೆ ಒಳಗಾಗಿದ್ದಾರೆ. 90 ವರ್ಷದ ಅಜ್ಜಿ ಮನೆಯಲ್ಲಿ ಅಜ್ಜಿ ಮತ್ತು ಆಕೆಯ ಮಗ ಮಾತ್ರ ವಾಸವಾಗಿದ್ದು ಮಗ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಸಣ್ಣ ತಗಡಿನ ಶೆಡ್​ನಿಂದ ಮನೆ ಮಾಡಿಕೊಳ್ಳಲಾಗಿದ್ದು ಎರಡೇ ಎರಡು ಲೈಟುಗಳಿವೆ. ಆದ್ರೆ ಈ ಬಾರಿ ಜೆಸ್ಕಾಂ ಬರೋಬ್ಬರಿ 1,03,315 ರೂ ಬಿಲ್ ನೀಡಿ ಶಾಕ್ ಕೊಟ್ಟಿದೆ. ಅಜ್ಜಿ ಮನೆಗೆ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.

ಹೊಸ ಮೀಟರ್ ಅಳವಡಿಸಿದ ಬಳಿಕ ಕರೆಂಟ್ ಬಿಲ್ ಲಕ್ಷಕ್ಕೆ ಏರಿದೆ. ಆರು ತಿಂಗಳ ಹಿಂದೆ ಜೆಸ್ಕಾಂ ಸಿಬ್ಬಂದಿ ವೃದ್ದೆಯ ಮನೆಗೆ ಮೀಟರ್ ಅಳವಡಿಸಿದ್ದರು. 6 ತಿಂಗಳಲ್ಲಿ ವಿದ್ಯುತ್ ಬಿಲ್ 1 ಲಕ್ಷ ದಾಟಿದೆ. ಒಂದೊತ್ತಿನ ಊಟಕ್ಕೆ ಪರದಾಡೋ ಅಜ್ಜಿಗೆ ಲಕ್ಷ ಬಿಲ್ ಬಂದಿರೋದ್ರಿಂದ ಅಜ್ಜಿ ಬಿಲ್ ಕಟ್ಟೊದು ಹೇಗೆ ಅಂತ ಕಣ್ಣಿರು ಹಾಕಿದ್ದಾರೆ.