ಸಮನ್ವಿ ಮನೆಗೆ ಭೇಟಿ ನೀಡಿ ತಂದೆ-ತಾಯಿಗಳಿಗೆ ಸಾಂತ್ವನ ಹೇಳಿದರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ

ಸಮನ್ವಿ ಬಲಿಯಾದ ಅಪಘಾಘತದಲ್ಲಿ ಅವಳ ತಾಯಿ ಅಮೃತಾ ನಾಯ್ಡು ಅವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿಯ ಬಗ್ಗೆ ಶಿವಕುಮಾರ ಅವರನ್ನು ಕೇಳಿದಾಗ, ಅವರಿನ್ನೂ ಚೇತರಿಸಿಕೊಂಡಿಲ್ಲ. ಗಾಯಗಳು ವಾಸಿಯಾಗಬೇಕು ಮತ್ತು ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿರುವುದರಿಂದ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದರು.

TV9kannada Web Team

| Edited By: Arun Belly

Jan 18, 2022 | 4:10 PM

ಜನೆವರಿ 13ರಂದು ರಸ್ತೆ ಅಪಘಾತವೊಂದರಲ್ಲಿ ಬಲಿಯಾದ ಕನ್ನಡಿಗರ ಕಣ್ಮಣಿ ಸಮನ್ವಿ ಮನೆಗೆ ಮಂಗಳವಾರ ಭೇಟಿ ನೀಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ದುಖಃತಪ್ತ ಕುಟುಂಬವನ್ನು ಸಂತೈಸಿದರು. ನಾಯ್ಡು ಅವರ ಕುಟುಂಬ ತಮಗೆ ಮೊದಲಿನಿಂದಲೂ ಪರಿಚಯ ಎಂದು ಹೇಳಿದ ಶಿವಕುಮಾರ ಅವರು ವಿಧಿ ಈ ಕುಟುಂಬದಲ್ಲಿ ಬಹಳ ಕ್ರೂರವಾಗಿ ಆಡಿದೆ ಎಂದರು. ಕೇವಲ 6ನೇ ವಯಸ್ಸಿನಲ್ಲೇ ಸಾಂಸ್ಕೃತಿಕ ಲೋಕದ (Cultural World) ತಾರೆಯಾಗಿ ಗುರುತಿಸಿಕೊಂಡು ಕರ್ನಾಟಕದಲ್ಲಿ ಮನೆಮಾತಾಗಿದ್ದ ಸಮನ್ವಿಯ ಸಾವು ಬಹಳ ಅನ್ಯಾಯ, ಯಮನಲ್ಲಿ ಕರುಣೆ ಅನ್ನೋದು ಕಿಂಚಿತ್ತೂ ಇಲ್ಲ. ಯಾರೋ ಮಧ್ಯವಯಸ್ಕರು ಮಾಡಬಾರದ ಕೆಟ್ಟ ಕೆಲಸಗಳನ್ನು ಮಾಡಿ ಸತ್ತರೆ ಬೇಜಾರೆನಿಸುವುದಿಲ್ಲ. ಆದರೆ ಸಮನ್ವಿ ಒಂದು ಅಮಾಯಕ ಮಗು, ಹಾಲಿನಂಥ ಮನಸ್ಸಿನ ಹಸುಳೆ. ಒಬ್ಬ ಲಾರಿ ಡ್ರೈವರ್ನ (Lorry Driver) ಅಜಾಗರೂಕತೆಗೆ ಮಗು ಬಲಿಯಾಯಿತಲ್ಲ ಎಂದು ಶಿವಕುಮಾರ ಭಾರದ ಮನಸ್ಸಿನಿಂದ ಹೇಳಿದರು.

ಅಪಘಾತಕ್ಕೆ ಸಿಕ್ಕು ಮಗುವಿನ ದೇಹ ಜಜ್ಜಿಹೋಗಿತ್ತು ಎಂದು ಸಮನ್ವಿಯ ತಂದೆ ಹೇಳಿದಾಗ ಕರುಳು ಕಿತ್ತು ಬಂದಂತಾಯಿತು. ಮಂಗಳವಾರ ಬೆಳಗ್ಗೆ ಟಿವಿಯಲ್ಲಿ ಮಗುವಿನ ಬಗ್ಗೆ ಪ್ರಸ್ತಾಪ ಬಂದಾಗ ತಡೆದುಕೊಳ್ಳಲಾಗಲಿಲ್ಲ. ವೈಯಕ್ತಿಕವಾಗಿ ಮತ್ತು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ಕುಟುಂಬವನ್ನು ಭೇಟಿಮಾಡಿ ಧೈರ್ಯ ತುಂಬುವುದು ತಮ್ಮ ಧರ್ಮ ಮತ್ತು ಕರ್ತವ್ಯವೂ ಹೌದು ಎಂದು ಶಿವಕುಮಾರ ಹೇಳಿದರು.

ಸಮನ್ವಿ ಬಲಿಯಾದ ಅಪಘಾಘತದಲ್ಲಿ ಅವಳ ತಾಯಿ ಅಮೃತಾ ನಾಯ್ಡು ಅವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿಯ ಬಗ್ಗೆ ಶಿವಕುಮಾರ ಅವರನ್ನು ಕೇಳಿದಾಗ, ಅವರಿನ್ನೂ ಚೇತರಿಸಿಕೊಂಡಿಲ್ಲ. ಗಾಯಗಳು ವಾಸಿಯಾಗಬೇಕು ಮತ್ತು ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿರುವುದರಿಂದ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದರು.

ಧೈರ್ಯ ಕಳೆದುಕೊಳ್ಳಬೇಡಿ ಅಂತ ಅವರಿಗೆ ಹೇಳಿರುವುದಾಗಿ ಎಂದ ಅವರು, ತಂದೆ ತಾಯಿಗಳು ಇನ್ನೂ ಚಿಕ್ಕ ವಯಸ್ಸಿನವರಾಗಿರುವುದರಿಂದ ಸಮನ್ವಿ ಅವರ ಕುಟುಂಬದಲ್ಲಿ ಮತ್ತೇ ಹುಟ್ಟಿ ಬರುತ್ತಾಳೆಂಬ ವಿಶ್ವಾಸ ತಮಗಿದೆ ಎಂದರು.

ಇದನ್ನೂ ಓದಿ:   Shocking Video: ನೋಡನೋಡುತ್ತಿದ್ದಂತೆ ಮೆಟ್ರೋ ರೈಲ್ವೆ ಹಳಿ ಮೇಲೆ ಮಹಿಳೆಯನ್ನು ತಳ್ಳಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ

Follow us on

Click on your DTH Provider to Add TV9 Kannada