Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರಿಸುತ್ತಿರುವ ಜಿಲ್ಲಾಡಳಿತದ ಪೂರ್ಣ ಲಾಭ ಪಡೆದ ಯಾದಗಿರಿ ಜನ ದೊಡ್ಡ ಗುಂಪು ಸೇರಿ ಸಂತೆ ನಡೆಸಿದರು!

ನಿದ್ರಿಸುತ್ತಿರುವ ಜಿಲ್ಲಾಡಳಿತದ ಪೂರ್ಣ ಲಾಭ ಪಡೆದ ಯಾದಗಿರಿ ಜನ ದೊಡ್ಡ ಗುಂಪು ಸೇರಿ ಸಂತೆ ನಡೆಸಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 18, 2022 | 6:56 PM

ಯಾದಗಿರಿಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾದರೆ ಅದಕ್ಕೆ ಜಿಲ್ಲಾಡಳಿತ ನೇರವಾಗಿ ಹೊಣೆಯಾಗುತ್ತದೆ. ಸಂತೆ ನಡೆಯಲು ಬಿಟ್ಟಿದ್ದು ದೊಡ್ಡ ತಪ್ಪು. ಕರ್ಫ್ಯೂ ಇಲ್ಲದಿದ್ದರೇನಂತೆ ಜನ ಗುಂಪಾಗಿ ಸೇರದ ಹಾಗೆ ಪೌರಾಡಳಿತ ನೋಡಿಕೊಳ್ಳಬೇಕಿತ್ತು.

ಯಾದಗಿರಿಯಲ್ಲಿ ಜಿಲಾಡಳಿತ ಸೊಂಪಾಗಿ ನಿದ್ರಿಸುತ್ತಿದೆ ಮಾರಾಯ್ರೇ. ಇದಕ್ಕೆ ಜ್ವಲಂತ ನಿದರ್ಶನ ಈ ವಿಡಿಯೋ. ಒಂದು ದೊಡ್ಡ ಜಾತ್ರೆಯಲ್ಲಿ ಸೇರುವಷ್ಟು ಜನ ಯಾದಗಿರಿ ನಗರದ ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆಯಲ್ಲಿ (ಎ ಪಿ ಎಮ್ ಸಿ) (APMC) ಸೇರಿದ್ದಾರೆ. ಯಾರಾದರೂ ಒಬ್ಬರ ಮುಖದಲ್ಲಿ ಮಾಸ್ಕ್ ಕಾಣಿಸಿದರೆ, ಯಾದಗಿರಿಗೆ ಹತ್ತಿರವಿರುವ ಮೈಲಾರಲಿಂಗನ ಆಣೆ!! ಇನ್ನು ಜಾತ್ರೆಯಲ್ಲಿ ಎಲ್ಲಿಂದ ಬರಬೇಕು ದೈಹಿಕ ಅಂತರ? ಕಾಣುತ್ತಿರುವವರು ಕೇವಲ ಯಾದಗಿರಿ ಜನ ಮಾತ್ರ ಅಲ್ಲ. ಸುತ್ತಮುತ್ತಲಿನ ಹಳ್ಳಿ, ರಾಯಚೂರು (Raichur) ಮತ್ತು ಜಿಲ್ಲ್ಲೆಗೆ ಹತ್ತಿರವಿರುವ ತೆಲಂಗಾಣದ (Telangana) ಗಡಿಭಾಗಳಿಂದಲೂ ಜನ ಬಂದಿದ್ದಾರೆ. ಇಲ್ಲಿ ನಡೆಯುತ್ತಿರುವುದು ಕುರಿಗಳ ಸಂತೆ. ಕುರಿಗಳಿಗಾದರೆ, ಸೋಂಕಿನ ವಿಷಯ ಗೊತ್ತಾಗಲಾರದು ಅದರೆ, ಜನ ಸಹ ಕುರಿಗಳಂತಾದರೆ ಹೇಗೆ ಸ್ವಾಮಿ? ಕುರಿಗಳು ಸಾರ್ ನಾವು ಕುರಿಗಳು!!

ಕರ್ನಾಟಕದಲ್ಲಿ ಸೋಮವಾರ 27,000 ಸಾವಿರಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುತ್ತಾ ಹೋಗಲಿದೆ. ಪಕ್ಷಾತೀತವಾಗಿ ನಮ್ಮ ರಾಜ್ಯದ ನಾಯಕರು ಕೋವಿಡ್ ಸೋಂಕು ಹರಡಲು ಎಲ್ಲ ಸವಲತ್ತುಗಳನ್ನು ಮಾಡಿಕೊಡುತ್ತಿದ್ದಾರೆ. ಕಾಂಗ್ರೆಸ್ ನವರು ಪಾದಯಾತ್ರೆ ಮಾಡುತ್ತಾರೆ, ಬಿಜೆಪಿಯವರು ಸಾರ್ವಜನಿಕ ಸಭೆಗಳನ್ನು ನಡೆಸುತ್ತಾರೆ. ಎಲ್ಲವನ್ನೂ ಮಾಡಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗುತ್ತಾರೆ. ನಾಯಕರಿಗೆ ಇರದ ಚಿಂತೆ ನಮಗ್ಯಾಕೆ ಎಂಬ ಮನೋಭಾವನೆ ಜನರಲ್ಲಿ ಹುಟ್ಟಿರಲಿಕ್ಕೂ ಸಾಕು.

ಯಾದಗಿರಿಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾದರೆ ಅದಕ್ಕೆ ಜಿಲ್ಲಾಡಳಿತ ನೇರವಾಗಿ ಹೊಣೆಯಾಗುತ್ತದೆ. ಸಂತೆ ನಡೆಯಲು ಬಿಟ್ಟಿದ್ದು ದೊಡ್ಡ ತಪ್ಪು. ಕರ್ಫ್ಯೂ ಇಲ್ಲದಿದ್ದರೇನಂತೆ ಜನ ಗುಂಪಾಗಿ ಸೇರದ ಹಾಗೆ ಪೌರಾಡಳಿತ ನೋಡಿಕೊಳ್ಳಬೇಕಿತ್ತು.

ಇಲ್ಲಿ ನೆರೆದಿರುವ ಜನರಲ್ಲಿ ಎಷ್ಟು ಜನ ಲಸಿಕೆ ಹಾಕಿಸಿಕೊಂಡಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಒಮೈಕ್ರಾನ್ ಬಹಳ ವೇಗವಾಗಿ ಹಬ್ಬುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದಾಗ್ಯೂ ನಮ್ಮ ಜನರಲ್ಲಿ ಮತ್ತು ಸ್ಥಳೀಯ ಆಡಳಿತಗಳಲ್ಲಿ ಉಡಾಫೆ ಮನೋಭಾವ. ಎರಡನೇ ಅಲೆಯಲ್ಲಿ ಏನು ನಡೆಯಿತು ಅನ್ನೋದನ್ನ ಜನ ಮರೆತಂತಿದೆ.

ಇದನ್ನೂ ಓದಿ:   ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ ಹೊರತಾಗಿಯೂ ಕುಕಿಂಗ್ ವಿಡಿಯೋ ಯೂಟ್ಯೂಬ್​ ಚಾನೆಲ್​ ಆರಂಭಿಸಿದ ಪ್ರಿಯಾಮಣಿ