ಕಳ್ಳಂಬೆಳ್ಳ ಕೆರೆಗೆ ರಂಧ್ರ, ಸಮಸ್ಯೆಗೆ ಸರಿಯಾಗಿ ಸ್ಪಂದಿಸದ ಅಧಿಕಾರಿಗಳನ್ನು ಶಾಸಕರೆದುರೇ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು!

ಅಧಿಕಾರಿಗಳು ಜನರಿಗೆ ಆಗುತ್ತಿರುವ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುವ ಬದಲು ಅದೇನೂ ದೊಡ್ಡ ಸಮಸ್ಯೆಯೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಶಾಸಕರೆದುರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಅಧಿಕಾರಿಗಳನ್ನು ಗದರುತ್ತಿರಬೇಕಾದರೆ, ಶಾಸಕರು ಮಧ್ಯಪ್ರವೇಶಿಸುವ ಗೋಜಿಗೆ ಹೋಗಿಲ್ಲ.

TV9kannada Web Team

| Edited By: Arun Belly

Jan 18, 2022 | 7:54 PM

ಕೆರೆಗಳು (Lakes) ಗ್ರಾಮೀಣ ಪ್ರದೇಶದಲ್ಲಿರಲಿ ಅಥವಾ ನಗರ ಅವು ಜನರ ಬದುಕಿನ ಜೀವನಾಡಿಗಳು ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಮಗೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿರುವ ಕಳ್ಳಂಬೆಳ್ಳ (Kallambella) ಗ್ರಾಮದ ಜನ ತಮ್ಮ ಊರಲ್ಲಿರುವ ನೈಸರ್ಗಿಕ ಕೆರೆಯ ಬಗ್ಗೆ ಆತಂಕದಲ್ಲಿದ್ದಾರೆ. ಇದು ಬೃಹತ್ ಗಾತ್ರದ ಕೆರೆ. ಗ್ರಾಮಸ್ಥರು ತಮ್ಮೆಲ್ಲ ನೀರಿನ ಅವಶ್ಯಕತೆಗಳಿಗಾಗಿ ಇದೇ ಕೆರೆಯನ್ನು ಅವಲಂಬಿಸಿದ್ದಾರೆ. ಆದರೆ ಈ ಕೆರೆಗೆ ರಂಧ್ರವೊಂದು ಸೃಷ್ಟಿಯಾಗಿ ಅದರ ಮೂಲಕ ನೀರು ಸೋರಿಕೆಯಾಗುತ್ತಿದೆ. ರಂಧ್ರವನ್ನು ಮುಚ್ಚದೆ ಹೋದರೆ ಕೆರೆಯ ಏರಿಯಲ್ಲಿ ಬಿರುಕು ಕಾಣುವ ಭೀತಿ ಗ್ರಾಮಸ್ಥರನ್ನು ಆವರಿಸಿದೆ. ತಮ್ಮ ಸಮಸ್ಯೆಯನ್ನು ಅವರು ಈ ಭಾಗದ ಶಾಸಕರಾಗಿರುವ ರಾಜೇಶ್ ಗೌಡ (Rajesh Gowda) ಅವರ ಹತ್ತಿರ ಹೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಜನರಿಗೆ ಆಗುತ್ತಿರುವ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುವ ಬದಲು ಅದೇನೂ ದೊಡ್ಡ ಸಮಸ್ಯೆಯೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಶಾಸಕರೆದುರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಅಧಿಕಾರಿಗಳನ್ನು ಗದರುತ್ತಿರಬೇಕಾದರೆ, ಶಾಸಕರು ಮಧ್ಯಪ್ರವೇಶಿಸುವ ಗೋಜಿಗೆ ಹೋಗಿಲ್ಲ.

ಚೆನ್ನಾಗಿ ಜಬರಿಸಿಕೊಂಡ ನಂತರ ಅಧಿಕಾರಿಗಳಿಗೆ ಗ್ರಾಮಸ್ಥರ ಸಮಸ್ಯೆ ಅರ್ಥವಾದಂತಿದೆ. ಶಾಸಕರ ಸಮ್ಮುಖದಲ್ಲಿ ಅವರು ಕೆರೆಗೆ ಬಿದ್ದಿರುವ ರಂಧ್ರವನ್ನು ಮುಚ್ಚಿಸಿ ನೀರು ಸೋರಿಕೆಯಾಗದಂತೆ ಮತ್ತು ಕೆರೆಯ ಏರಿಗೂ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದಾಗಿ ಹೇಳುತ್ತಾರೆ.

ಇದನ್ನೂ ಓದಿ:   ಜನರೊಂದಿಗೆ ಬೆರೆತು ಕ್ರಿಕೆಟ್ ಆಡಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ; ವಿಡಿಯೋ ವೈರಲ್

Follow us on

Click on your DTH Provider to Add TV9 Kannada