ಕಾವೇರಿ ಜಲ ವಿವಾದ: CWMA ಆದೇಶದಿಂದ ಕಂಗೆಟ್ಟ ಕರ್ನಾಟಕ; ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕೆಆರ್‌ಎಸ್ ಜಲಾಶಯ ಬತ್ತಿ ಹೋಗುತ್ತಿದೆ. ಈ ಸಂದರ್ಭದಲ್ಲೂ ತಮಿಳುನಾಡಿಗೆ ಸರಿಸುಮಾರು 4 ಟಿಎಂಸಿ ನೀರು ಬಿಡಲು ಸಿಡಬ್ಲ್ಯೂಎಂಎ ಆದೇಶಿಸಿದೆ. ಇದರಿಂದ ರೈತರಿಗೆ ನೀರಿಲ್ಲದೆ ಬೆಳೆ ಬೆಳೆಯಲು ಕಷ್ಟವಾಗಿದೆ, ಅಲ್ಲದೆ ಬೆಂಗಳೂರು ಸೇರಿ ಹಲವು ನಗರಗಳಿಗೆ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತವಾಗಿದೆ.
ಮಂಡ್ಯ, ಅಕ್ಟೋಬರ್ 09: ಕರ್ನಾಟಕದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದ ಜಲಾಶಯಗಳು ಬತ್ತಿ ಹೋಗುತ್ತಿವೆ. ಅದರಲ್ಲೂ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. 49 ಟಿಎಂಸಿ ಸಾಮರ್ಥ್ಯದ ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ ಕೇವಲ 24 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ ಮತ್ತೆ 15 ದಿನಗಳ ಕಾಲ ಪ್ರತಿದಿನ 3000 ಕ್ಯೂಸೆಕ್ಸ್ ನೀರನ್ನು ಹರಿಸಲು ಆದೇಶಿಸಿದೆ. ಈ ಆದೇಶದಿಂದ ಸುಮಾರು 4 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಲಿದ್ದು, ಕರ್ನಾಟಕದ ಪಾಲಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಲಭ್ಯವಿರುವ 24 ಟಿಎಂಸಿ ನೀರಿನಲ್ಲಿ ಬಳಕೆಗೆ ಯೋಗ್ಯವಾದದ್ದು ಕೇವಲ 19 ಟಿಎಂಸಿ ಮಾತ್ರ. ಇದರಲ್ಲಿ 4 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದರೆ, ಉಳಿಯುವುದು ಕೇವಲ 15 ಟಿಎಂಸಿ. ಮಂಡ್ಯ ಜಿಲ್ಲೆಯ ರೈತರಿಗೆ ಈಗಾಗಲೇ ಎರಡು ಕಟ್ಟು ಪದ್ಧತಿಯಲ್ಲಿ ನೀರು ನೀಡಲಾಗಿದ್ದು, ಇನ್ನೂ ಎರಡು ಕಟ್ಟು ನೀರಿಗಾಗಿ 12 ಟಿಎಂಸಿ ಬೇಕಿದೆ. ಜೊತೆಗೆ ಬೆಂಗಳೂರು, ಮೈಸೂರು ಮತ್ತು ಮಂಡ್ಯ ನಗರಗಳಿಗೆ ಕುಡಿಯುವ ನೀರಿಗಾಗಿ ಪ್ರತಿ ತಿಂಗಳು 2-3 ಟಿಎಂಸಿ ನೀರು ಅಗತ್ಯವಿದೆ. ಈ ಪರಿಸ್ಥಿತಿಯು ರಾಜ್ಯದ ರೈತರಿಗೆ ಮರಣಶಾಸನವಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಭೀತಿ ಎದುರಾಗಿದೆ. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

