ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಜಲ ಮಾಪನ ಕೇಂದ್ರದ ಬಳಿ ನೀರು ಹರಿಯುವ ದೃಶ್ಯ ಟಿವಿ9ಗೆ ಲಭ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Jul 21, 2024 | 6:01 PM

ಕೊಡಗಿನಲ್ಲಿ ಭಾರೀ ಮಳೆಯ( kodagu Rain) ಪರಿಣಾಮವಾಗಿ ಕೃಷ್ಣರಾಜ ಸಾಗರ( KRS Dam) ಅತಿ ಬೇಗನೇ ತುಂಬುವ ಹಂತಕ್ಕೆ ಬಂದಿದೆ. ಹೌದು.. ಕಾವೇರಿ ಕೊಳ್ಳದಲ್ಲಿ ಅಪಾರ ಮಳೆ ಹಿನ್ನಲೆ ಕಬಿನಿ, ಕೆಆರ್​ಎಸ್​ನಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಗೆ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಕಾವೇರಿ ತಮಿಳುನಾಡಿನ ದಾಹ ತಣಿಸಿದ್ದಾಳೆ.

ಚಾಮರಾಜನಗರ, (ಜುಲೈ 21): ಕಾವೇರಿ ಕೊಳ್ಳದಲ್ಲಿ ಅಪಾರ ಮಳೆಯಾಗುತ್ತಿರುವುದರಿಂದ ಕೆಆರ್​ಎಸ್​ ಜಲಾಶಯ ತುಂಬುವ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ತಮಿಳುನಾಡಿಗೆ ಎಷ್ಟು ನೀರು ಬಿಟ್ಟಿದ್ದೇವೆಂಬ ಅಳತೆ ಗೋಲು ಉಳ್ಳ ಹೊಗೆನಕಲ್ ಸಮೀಪವಿರುವ ಬಿಳಿಗುಂಡ್ಲು ಬಳಿ ಇದೆ. ಈ ಜಲ ಮಾಪನ ಕೇಂದ್ರದ ಬಳಿ ನೀರು ಹರಿದು ಹೋಗುತ್ತಿದೆ. ಇನ್ನು ಬಿಳಿಗುಂಡ್ಲು ಜಲ ಮಾಪನ ಕೇಂದ್ರದ ಬಳಿ ನೀರು ಹರಿಯುವ ದೃಶ್ಯ ಟಿವಿ9ಗೆ ಲಭ್ಯವಾಗಿದೆ.

ಭಾನುವಾರ ಬೆಳಿಗ್ಗೆ ನಂತರ ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿ ಮೂಲಕ ಹೊರ ಹರಿವಿನ ಪ್ರಮಾಣವನ್ನು ಐವತ್ತು ಸಾವಿರ ಕ್ಯೂಸೆಕ್‌ಗೆ ಏರಿಸಲಾಗಿದೆ. ಇದರಿಂದ ಹೆಚ್ಚಿನ ನೀರು ನದಿ ಮೂಲಕ ಹೋಗುತ್ತಿದೆ. ಜಲಾಶಯಕ್ಕೆ ಇನ್ನೂ ಎರಡು ಮೂರು ದಿನ ಭಾರೀ ಪ್ರಮಾಣದಲ್ಲಿ ಕೆಆರ್‌ಎಸ್‌ ಜಲಾಶಯಕ್ಕೆ ಬರುವ ನಿರೀಕ್ಷೆ ಇರುವುದರಿಂದ ಹೊರ ಹರಿವಿನ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಲಿದೆ. ಈ ಮೂಲಕ ಕಾವೇರಿ ತಮಿಳುನಾಡಿನ ನೀರಿನ ದಾಹ ತಣಿಸಿದ್ದಾಳೆ.

ಮೊನ್ನೆ ಅಷ್ಟೇ ತಮಿಳುನಾಡು ಕಾವೇರಿ ನೀರು ಹರಿಸುತ್ತಿಲ್ಲ ಎಂದು ಕಾವೇರಿ ಪಾಧಿಕಾರದ ಮುಂದೆ ವಾದ ಮಂಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಜುಲೈ ಅಂತ್ಯದ ವರಗೆ ಪ್ರತಿ ದಿನ 1 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಆದ್ರೆ, ಇತ್ತ ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷಗಳ ಸಭೆ ನಡೆಸಿ ಅಷ್ಟೊಂದು ನೀಡು ಬಿಡಲು ಆಗುವುದಿಲ್ಲ ದಿನಕ್ಕೆ 8 ಸಾವಿರ ಕ್ಯೂಸೆಕ್​​ ನೀರು ಮಾತ್ರ ಬಿಡಬಹುದು ಎಂದು ತೀರ್ಮಾನ ಕೈಗೊಂಡಿದ್ದರು. ಆದ್ರೆ, ಇದೀಗ ಮಳೆ ಹೆಚ್ಚಾಗಿರುವುದರಿಂದ ಕಾವೇರಿಯ ಒಡಲು ಬಹುತೇಕ ಭರ್ತಿಯಾಗಿದೆ, ಹೀಗಾಗಿ ಕಾವೇರಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದಾಳೆ.

Published On - 1:54 pm, Sun, 21 July 24

Follow us on