ಅಪಘಾತ, ಹಲ್ಲೆ ಆರೋಪಕ್ಕೆ ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ಮೊದಲ ರಿಯಾಕ್ಷನ್​

| Updated By: ಮದನ್​ ಕುಮಾರ್​

Updated on: Mar 08, 2024 | 5:15 PM

‘ನಮ್ಮಿಂದ ತಪ್ಪಾಗಿದ್ದರೆ ನಾವು ಕ್ಷಮೆ ಕೇಳಿರುತ್ತೇವೆ. ಆದರೆ ನಾನು ಕೆಟ್ಟದಾಗಿ ಮಾತಾಡಿದೆ ಅಂತ ಅವರು ಹೇಳುತ್ತಿದ್ದಾರೆ. ಅದು ಅವರ ಕಲ್ಪನೆ. ನಂತರ ಅವರ ಅಣ್ಣ ಕುಡಿದು ಬಂದು ಮಾತಾಡಿದ. ಹಾಗೆ ನೋಡಿದರೆ ನಾನು ದೂರು ನೀಡಬೇಕಿತ್ತು. ನನ್ನ ಪಾಡಿಗೆ ನಾನು ಶೂಟಿಂಗ್​ಗೆ ಹೋದೆ. ಮರುದಿನ ನಾನು ದೂರು ಕೊಟ್ಟೆ. ಇದಾಗಿ 3 ತಿಂಗಳಾಗಿವೆ. ಈಗ ಮೀಡಿಯಾ ಮುಂದೆ ಬಂದಿದ್ದಾರೆ’ ಎಂದು ಲಕ್ಷ್ಮೀ ಸಿದ್ದಯ್ಯ ಹೇಳಿದ್ದಾರೆ.

ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ (Lakshmi Siddaiah) ಅವರು ಮಾಧುರಿ ಎಂಬ ಯುವತಿಯ ಮೇಲೆ ಹಲ್ಲೆ (Assault) ಮಾಡಿದ್ದಾರೆ ಎಂಬ ಆರೋಪ ಇದೆ. ಆ ಘಟನೆ ನಡೆದು ಮೂರು ತಿಂಗಳು ಕಳೆದಿದೆ. ಈಗ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯರಿಬ್ಬರು ಮಾಡಿದ ಆರೋಪಗಳಿಗೆ ಲಕ್ಷ್ಮೀ ಸಿದ್ದಯ್ಯ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಂದು ನಡೆದಿದ್ದು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ನನ್ನಿಂದ ಯಾವುದೇ ಹಲ್ಲೆ ಆಗಿಲ್ಲ. ಅಂದು ಸಂಜೆ 5.45ರ ಸಮಯದಲ್ಲಿ ಮೈಸೂರು ರಸ್ತೆಯಿಂದ ಜ್ಞಾನ ಭಾರತಿಗೆ ಹೋಗುವ ರಸ್ತೆಯಲ್ಲಿ ತುಂಬ ಟ್ರಾಫಿಕ್​ ಜಾಮ್​ ಇತ್ತು. ನಾನು ಕಾರಿನಲ್ಲಿ ಹೋಗುತ್ತಿದ್ದೆ. ಈ ಹುಡುಗಿಯರು ಎಲ್ಲಿದ್ದರೋ ಗೊತ್ತಿಲ್ಲ. ಪಕ್ಕದಲ್ಲಿ ಪಾಸ್​ ಆದರು. ನನ್ನ ಎಡಗಡೆ ಮಿರರ್​ಗೆ ಹೊಡೆದು ಕಾಮನ್​ ಸೆನ್ಸ್​ ಇಲ್ಲವಾ ಅಂತ ಬಯ್ಯೋಕೆ ಶುರು ಮಾಡಿದರು. ಗಾಡಿ ಚಲಿಸುತ್ತಿದ್ದ ಕಾರಣ ನನ್ನ ಗಾಡಿಯ ಮಿರರ್​​ ಅವರ ಗಾಡಿ ಮಿರರ್​ಗೆ ಟಚ್​ ಆಯ್ತು. ತಕ್ಷಣ ನನ್ನ ಗಾಡಿಯ ಎದುರಿಗೆ ಬಂದರು. ನಾನು ಸಾಧ್ಯವಾದಷ್ಟು ಬೇಕ್​ ಹಾಕಿದೆ. ಆದರೂ ಬ್ರೇಕ್​ ಲೈಟ್​ಗೆ ಸ್ವಲ್ಪ ಟಚ್​ ಆಯ್ತು. ಇಳಿಯೇ ಕೆಳಗೆ ಅಂತ ಏಕವಚನದಲ್ಲಿ ಮಾತನಾಡಿದರು’ ಎಂದಿದ್ದಾರೆ ಲಕ್ಷ್ಮೀ ಸಿದ್ದಯ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.