ಕಂಪ್ಲಿ ಸಕ್ಕರೆ ಕಾರ್ಖಾನೆ ಬಗ್ಗೆ ಶಾಸಕ ಗಣೇಶ್ ಪುನಃ ಪ್ರಸ್ತಾಪಿಸಿದಾಗ ಸಚಿವ ಮಾಧುಸ್ವಾಮಿ ವಸ್ತುಸ್ಥಿತಿಯನ್ನು ಸದನಕ್ಕೆ ವಿವರಿಸಿದರು

ಕಂಪ್ಲಿ ಸಕ್ಕರೆ ಕಾರ್ಖಾನೆ ಬಗ್ಗೆ ಶಾಸಕ ಗಣೇಶ್ ಪುನಃ ಪ್ರಸ್ತಾಪಿಸಿದಾಗ ಸಚಿವ ಮಾಧುಸ್ವಾಮಿ ವಸ್ತುಸ್ಥಿತಿಯನ್ನು ಸದನಕ್ಕೆ ವಿವರಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 11, 2022 | 5:39 PM

ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಸೋಮವಾರದಂದು ಅಡ್ವೋಕೇಟ್ ಜನರಲ್ ಅವರನ್ನು ಕರೆಸುವುದಾಗಿ ಹೇಳಿದ ಸಚಿವರು ಕಂಪ್ಲಿ ಗಣೇಶ್ ಅವರಿಗೆ ಸಭೆಯಲ್ಲಿ ಹಾಜರಿರಲು ಹೇಳಿದರು.

ಕಂಪ್ಲಿ ಸಕ್ಕರೆ ಕಾರ್ಖಾನೆ (Kampli Sugar Factory) ವಿಷಯ ಶುಕ್ರವಾರ ವಿಧಾನಸಭೆಯಲ್ಲಿ ಪುನಃ ಮಾರ್ದನಿಸಿತು. ಶಾಸಕ ಕಂಪ್ಲಿ ಗಣೇಶ್ (Kampli Ganesh) ಅವರೇ ಸದನದಲ್ಲಿ ಹೇಳಿದ ಹಾಗೆ ಇಂದು ಮೂರನೇ ಬಾರಿಗೆ ವಿಷಯವನ್ನು ಪ್ರಸ್ತಾಪಿದ್ದಾರೆ. 300 ಕೋಟಿ ಜಮೀನನ್ನು ಸರ್ಕಾರವು ಒಪ್ಪಂದವೊಂದರ (agreement) ಮೂಲಕ ಕೇವಲ ಐದೂವರೆ ಕೋಟಿ ರೂ. ಗಳಿಗೆ ಪರಭಾರೆ ಮಾಡಿದ್ದು ಬಹಳ ಗಂಭೀರವಾದ ಸಂಗತಿಯಾಗಿದೆ. ಹಾಗಾಗಿ ತಾನು ಎಲ್ಲ ಕಾಗದಪತ್ರಗಳೊಂದಿಗೆ ಸದನಕ್ಕೆ ಬಂದಿದ್ದು ಚರ್ಚೆಗೆ ಅರ್ಧ ಗಂಟೆ ಅವಕಾಶ ನೀಡಬೇಕೆಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕೋರುತ್ತಾರೆ. ವಿಷಯದ ಮೇಲೆ ಈಗಾಗಲೇ ಚರ್ಚೆಯಾಗಿದೆ ಎಂದು ಸ್ಪೀಕರ್ ಅವರು ಹೇಳಿದಾಗ ಒಬ್ಬ ಸದನದಲ್ಲಿ ಹಾಜರಿದ್ದ ಸದಸ್ಯರೊಬ್ಬರು, ಬಹಳ ಮುಖ್ಯವಾದ ವಿಷಯವಾಗಿದೆ, ಅವಕಾಶ ಕೊಡಿ ಎಂದು ಆಗ್ರಹಿಸುತ್ತಾರೆ. ಅಗ ಸರ್ಕಾರದ ಪರವಾಗಿ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು ಕಂಪ್ಲಿ ಸಕ್ಕರೆ ಕಾರ್ಖಾನೆ ಬಗ್ಗೆ ಪ್ರಸಕ್ತ ವಸ್ತುಸ್ಥಿತಿಯನ್ನು ಸದನಕ್ಕೆ ವಿವರಿಸುತ್ತಾರೆ.

ಕಂಪ್ಲಿ ಸಕ್ಕರೆ ಕಾರ್ಖಾನೆ ಕುರಿತು ಈಗಾಗಲೇ ವ್ಯಾಪಕವಾಗಿ ಚರ್ಚೆಯಾಗಿದೆ. ಅದನ್ನು ವ್ಯಕ್ತಿಯೊಬ್ಬರಿಗೆ ಹಸ್ತಾಂತರ ಮಾಡಿದ್ದರ ವಿರುದ್ಧ ಸ್ಥಳೀಯರು ಮುಷ್ಕರ ನಡೆಸಿದ ಬಳಿಕ ಹಸ್ತಾಂತರ ಮಾಡಿದ್ದು ಸರಿಯಲ್ಲ ಅಂತ ಸರ್ಕಾರಕ್ಕೆ ಮನವರಿಕೆ ಆದ ನಂತರ ಒಪ್ಪಂದವನ್ನು ರದ್ದುಮಾಡಲಾಗಿದೆ. ಸದ್ಯಕ್ಕೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕೆಲಸ ನಿಂತು ಹೋಗಿರುವುದಕ್ಕೆ ಕಾರಣ ಜನರಿಂದ ಎದುರಾಗಿರುವ ಅಡಚಣೆ ಅಂತ ನ್ಯಾಯಾಧೀಶರೇ ಹೇಳಿದ್ದರಿಂದ ಯಾಕೆ ಕಬ್ಬು ಅರೆಯುವುದು ನಿಂತಿದೆ ಅಂತ ಕೇಳಲಾಗಲ್ಲ ಎಂದು ಮಾಧುಸ್ವಾಮಿ ಅವರು ಸದನಕ್ಕೆ ತಿಳಿಸಿದರು.

ಅದಾದ ಮೇಲೆ ಕಾರ್ಖಾನೆ ಖರೀದಿಸಿದವರು ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದರು ಮತ್ತು ಸರ್ಕಾರ ಒಪ್ಪಂದ ರದ್ದು ಮಾಡಿದ್ದು ತಪ್ಪು ಅಂತ ಹೇಳಿರುವ ನ್ಯಾಯಾಲಯ ತಡೆಯಾಜ್ಞೆಯನ್ನೂ ನೀಡಿದೆ. ಈ ತೀರ್ಪಿನ ವಿರುದ್ಧ ಮನವಿ ಸಲ್ಲಿಸುವ ಅವಕಾಶವಿದೆಯಾ ಎಂದು ಸರ್ಕಾರ ಯೋಚಿಸುತ್ತಿದೆ ಮತ್ತು ಹಾಗೊಂದು ವೇಳೆ ಅವಕಾಶವಿದ್ದರೆ, ಅದನ್ನು ಮಾಡಲಾಗುವುದು ಎಂದು ಮಾಧುಸ್ವಾಮಿ ಹೇಳಿದರು. ಇದು ಕಾನೂನಿನ ವಿಚಾರವಾಗಿರುವುದರಿಂದ ಬಹಳ ಎಚ್ಚರಿಕೆಯಿಂದ ಉತ್ತರಿಸಬೇಕು ಅಂತ ತಾನು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್ ಅವರಿಗೆ ತಿಳಿಸಿರುವುದಾಗಿ ಸಚಿವರು ಹೇಳಿದರು.

ಈ ಸಂಬಂಧವಾಗಿ ಮುಂದುವರಿಯಲು ಕಾನೂನು ರೀತ್ಯಾ ಅವಕಾಶಗಳ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಚರ್ಚೆಗೆ ಅವಕಾಶ ನೀಡುವುದು ಒಳ್ಳೆಯದು ಅಂತ ಮಾಧುಸ್ವಾಮಿ ಪೀಠಕ್ಕೆ ತಿಳಿಸಿದರು. ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಸೋಮವಾರದಂದು ಅಡ್ವೋಕೇಟ್ ಜನರಲ್ ಅವರನ್ನು ಕರೆಸುವುದಾಗಿ ಹೇಳಿದ ಸಚಿವರು ಕಂಪ್ಲಿ ಗಣೇಶ್ ಅವರಿಗೆ ಸಭೆಯಲ್ಲಿ ಹಾಜರಿರಲು ಹೇಳಿದರು.

ಅವರ ಉತ್ತರದಿಂದ ತೃಪ್ತರಾದ ಸ್ಪೀಕರ್ ಅವರು ಸಕ್ಕರೆ ಸಚಿವ ಶಂಕರ ಪಾಟೀಲ ಅವರಿಗೂ ಸಭೆಗೆ ಹೋಗುವಂತೆ ಸೂಚಿಸಿದರು.

ಇದನ್ನೂ ಓದಿ:  ಅಧ್ಯಕ್ಷರೇ, ಕುಮಾರಸ್ವಾಮಿ ಸದನದ ಕಾಲಹರಣ ಮಾಡುತ್ತಿದ್ದಾರೆ; ನೀವು ಅದಕ್ಕೆ ಅವಕಾಶ ನೀಡುತ್ತಿರುವಿರಿ: ಸ್ಪೀಕರ್​ಗೆ ಹೇಳಿದರು ಸಿದ್ದರಾಮಯ್ಯ