ಮೇಕೆದಾಟು ಯೋಜನೆ ಜಾರಿಗೆ ಬಂದರೆ ಅದರ ಶ್ರೇಯಸ್ಸೆಲ್ಲ ಬಿಜೆಪಿ ತೆಗೆದುಕೊಳ್ಳಲಿ, ನಮಗ್ಯಾವುದೇ ಕ್ರೆಡಿಟ್ ಬೇಡ: ಡಿಕೆ ಶಿವಕುಮಾರ
ಯೋಜನೆಯ ಡಿಪಿಆರ್ ಗೆ ಅನುಮೋದನೆ ಸಿಕ್ಕಿರುವುದರಿಂದ ಅದು ಜಾರಿಗೊಂಡ ಶ್ರೇಯಸ್ಸು ತಮ್ಮ ಪಕ್ಷಕ್ಕೆ ದಕ್ಕಬಾರದು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ.
ಮೇಕೆದಾಟು ಯೋಜನೆ (Mekedatu Project) ಶೀಘ್ರ ಅನುಷ್ಠಾನ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೇ ಹಂತ ಪಾದಯಾತ್ರೆಯ ಮೂರನೇ ದಿನವಾದ ಮಂಗಳವಾರ ಅದು ಬೆಂಗಳೂರು ನಗರವನ್ನು ಪ್ರವೇಶಿಸಿದೆ. ಪಾದಯಾತ್ರೆಯ ಬಗ್ಗೆ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ವಿರುದ್ಧ ಕಾಮೆಂಟ್ ಮಾಡುವುದನ್ನು ಮುಂದುವರಿಸಿದ್ದಾರೆ. ಯೋಜನೆಯ ಡಿಪಿಆರ್ ಗೆ ಅನುಮೋದನೆ ಸಿಕ್ಕಿರುವುದರಿಂದ ಅದು ಜಾರಿಗೊಂಡ ಶ್ರೇಯಸ್ಸು ತಮ್ಮ ಪಕ್ಷಕ್ಕೆ ದಕ್ಕಬಾರದು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9 ಬೆಂಗಳೂರು ವರದಿಗಾರ ಪ್ರಮೋದ್ ಶಾಸ್ತ್ರಿ ಪಾದಯಾತ್ರೆಯಲ್ಲಿ ಬಸವಳಿದು ಒಂದೆಡೆ ಕೂತು ಐಸ್ ಕ್ರೀಮ್ ತಿನ್ನುತ್ತಿದ್ದ ಶಿವಕುಮಾರ ಅವರನ್ನು ಮಾತಾಡಿಸಿದರು.
‘ನಮಗ್ಯಾವುದೇ ಕ್ರೆಡಿಟ್ ಬೇಕಿಲ್ಲ, ಎಲ್ಲವನ್ನು ಅವರೇ ತೆಗೆದುಕೊಳ್ಳಲಿ, ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಾನೂ ಹೋಗ್ತೀನಿ, ಹೇಗಿದ್ರೂ ಆವರದ್ದು ಡಬಲ್ ಎಂಜಿನ್ ಸರ್ಕಾರ. ಡಿಪಿಆರ್ ಈಗಾಗಲೇ ಅಪ್ರೂವ್ ಆಗಿದೆ. ಯೋಜನೆಗೆ ಪರಿಸರ ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ಶಂಕುಸ್ಥಾಪನೆ ನೇರವೇರಿಸುವಾಗ ನಾವು (ಕಾಂಗ್ರೆಸ್) ಬಾಜ ಬಜಂತ್ರಿ ತೆಗೆದುಕೊಂಡು ಹೋಗಿ ಅವರನ್ನು ಅಭಿನಂದಿಸುತ್ತೇವೆ,’ ಎಂದು ಶಿವಕುಮಾರ ಹೇಳಿದರು.
ಅದಾದ ಮೇಲೆ ವರದಿಗಾರ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು, ಅವರಪ್ಪನಾಣೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ನೀಡಿರುವ ಹೇಳಿಕೆಯ ಬಗ್ಗೆ ಶಿವಕುಮಾರ ಅವರ ಗಮನ ಸೆಳೆದಾಗ, ಅವರು ನಿರ್ಲಿಪ್ತತೆಯಿಂದ, ‘ನಮ್ಮಪ್ಪ ಅಂತೂ ಈಗ ಬದುಕಿಲ್ಲ, ಅವರು ಮತ್ತೇ ಬದುಕಿ ಬಂದಾಗ ಆ ವಿಷಯ ನೋಡೋಣ,’ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆಯಿಂದ ಬೆಂಗಳೂರಿಗರಿಗೆ ಟ್ರಾಫಿಕ್ ಸಂಕಷ್ಟ; ಅದು ಬಿಟ್ಟು ಬೇರೆ ಉಪಯೋಗವಿಲ್ಲ: ಬಸವರಾಜ ಬೊಮ್ಮಾಯಿ