ಅಫಘಾನಿಸ್ತಾನದ ಮಹಿಳೆಯರು ಇನ್ನು ತಾಲಿಬಾನಿಗಳ ಕೈಗೆ ಸಿಕ್ಕು ನಲುಗಲಿದ್ದಾರೆ, ಲೈಂಗಿಕ ಜೀತದಾಳುಗಳಂತೆ ಅವರನ್ನು ನಡೆಸಿಕೊಳ್ಳಲಾಗುತ್ತದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2021 | 5:24 PM

ತಾಲಿಬಾನಿಗಳು ತಾವು ಹೊರಡಿಸಿವ ಫರ್ಮಾನನ್ನು ಪಾಲಿಸಲು ಮಹಿಳೆಯೊಬ್ಬಳು ಹಿಂದೇಟು ಹಾಕಿದರೆ ಆಕೆಯನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ. ಬೀದಿಗಳಲ್ಲಿ ಬಂದೂಕು ಹಿಡಿದುಕೊಂಡು ತಿರುಗುವ ತಾಲಿಬಾನಿ ಸೈನಿಕನೇ ಅಲ್ಲಿ ನ್ಯಾಯಾಲಯ.

ತಾಲಿಬಾನಿಗಳ ಅಫಘಾನಿಸ್ತಾನದಲ್ಲಿ ಮಹಿಳೆಯರ ಬದುಕು ದುರ್ಭರ ಮತ್ತು ನರಕಮಯವಾಗಲಿದೆ ಎನ್ನುವುದು ಆರಂಭದಲ್ಲೇ ಗೊತ್ತಾಗಿದೆ. ದೇಶದ ನಾನಾ ಭಾಗಗಳಲ್ಲಿದ್ದ ಬ್ಯೂಟಿ ಪಾರ್ಲರ್ಗಳನ್ನು ಮುಚ್ಚಿಸಲಾಗುತ್ತಿದೆ ಮತ್ತು ಹೆಣ್ಣುಮಕ್ಕಳು ಜೀನ್ಸ್ ಧರಿಸಬಾರದು, ಫ್ಯಾಶನೇಬಲ್ ಉಡುಪು ಮತ್ತು ಚಪ್ಪಲಿ ಧರಿಸಬಾರದು, ಇಡೀ ದೇಹ ಮುಚ್ಚುವಂತೆ ಬಟ್ಟೆ ಧರಿಸಿಯೇ ಹೊರಬರಬೇಕು, ಒಬ್ಬ ಮಹಿಳೆ ಹೊರಬಂದರೂ ಆಕೆಯೊಂದಿಗೆ ಒಬ್ಬ ಪುರುಷನಿರಲೇ ಬೇಕು ಎಂಬ ಫರ್ಮಾನು ತಾಲಿಬಾನಿಗಳು ಇಷ್ಟರಲ್ಲೇ ಹೊರಡಿಸಲಿದ್ದಾರೆ. ನಿಮಗೆ ಆಶ್ವರ್ಯವಾಗಬಹುದು, ತಾಲಿಬಾನಿಗಳ ಪಾಲಿಗೆ ಹೆಣ್ಣು ಒಂದು ಭೋಗದ ವಸ್ತು ಮಾತ್ರ. ಅವರ ಕಾಮ ತೃಷೆ ತೀರಿಸಿಕೊಳ್ಳಲು, ಮಕ್ಕಳು ಹುಟ್ಟಿಸಲು ಮಾತ್ರ ಅವರು ಮೀಸಲು ಅಂತ ತಾಲಿಬಾನಿಗಳು ಭಾವಿಸುತ್ತಾರೆ. ಹಿಂದೆ ಅಫಘಾನಿಸ್ತಾನವನ್ನು ಆಳಿದ ತಾಲಿಬಾನಿ ಬಂಡುಕೋರರು ಅಲ್ಲಿನ ಹೆಂಗಸರನ್ನು ಅಕ್ಷರಶಃ ಲೈಂಗಿಕ ಜೀತದಾಳುಗಳು ಮತ್ತು ಪ್ರಾಣಿಗಳ ಹಾಗೆ ನಡೆಸಿಕೊಂಡಿದ್ದರು.

ಯುವತಿಯರಿಗೆ 18 ವರ್ಷವಾಗುವ ಮೊದಲೇ ಮದುವೆ ಮಾಡಬೇಕು ಎಂದು ತಾಲಿಬಾನ್ ಹೇಳುತ್ತದೆ. ಯುವತಿಯರು ತಮಗೆ ಇಷ್ಟವಾಗುವ ಪುರುಷನನ್ನು ಪ್ರೀತಿಸುವಂತಿಲ್ಲ. ಪ್ರೇಮಿಗಳು ಸಿಕ್ಕಿ ಹಾಕಿಕೊಂಡರೆ ಇಬ್ಬರನ್ನೂ ಕಲ್ಲೆಸೆದು ಕೊಲ್ಲಲಾಗುತ್ತದೆ.

ತಾಲಿಬಾನಿಗಳು ತಾವು ಹೊರಡಿಸಿವ ಫರ್ಮಾನನ್ನು ಪಾಲಿಸಲು ಮಹಿಳೆಯೊಬ್ಬಳು ಹಿಂದೇಟು ಹಾಕಿದರೆ ಆಕೆಯನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ. ಬೀದಿಗಳಲ್ಲಿ ಬಂದೂಕು ಹಿಡಿದುಕೊಂಡು ತಿರುಗುವ ತಾಲಿಬಾನಿ ಸೈನಿಕನೇ ಅಲ್ಲಿ ನ್ಯಾಯಾಲಯ. ತಪ್ಪಿತಸ್ಢರೆಂದು ಪರಿಗಣಿಸುವ ಮಹಿಳೆಯರನ್ನು ಗುಂಡಿಟ್ಟು ಕೊಲ್ಲುವ ಅಧಿಕಾರ ಅವನಿಗಿರುತ್ತದೆ.

ಆಫ್ಘಾನಿ ಮಹಿಳೆಯರು ಅಸ್ವಸ್ಥರಾದರೆ ಅವರು ಮಹಿಳಾ ವೈದ್ಯರನ್ನು ಮಾತ್ರ ಕಾಣಬೇಕು, ಪುರುಷ ವೈದ್ಯನಲ್ಲಿಗೆ ಹೋದರೆ ಶಿಕ್ಷೆಗೊಳಗಾಗುತ್ತಾಳೆ. ಆಕೆ ಏರುಧ್ವನಿಯಲ್ಲಿ ಮಾತಾಡುವುದು ಕೂಡ ನಿಷಿದ್ಧ.
ಇನ್ನು ಮುಂದೆ ಆಫ್ಘಾನಿ ಮಹಿಳೆಯರ ಸ್ಥಿತಿ ಹೀಗಾಗಲಿದೆ.

ಇಂಥ ವ್ಯವಸ್ಥೆಯನ್ನು ಪಾಕಿಸ್ತಾನ ಸ್ವಾಗತಿಸಿದೆ. ತಾಲಿಬಾನಿಗಳಿಗಳು ಸರ್ಕಾರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ, ‘ಅಫಘಾನಿಸ್ತಾನ ಕೊನೆಗೂ ದಾಸ್ಯತ್ವದಿಂದ ಮುಕ್ತಿ ಪಡೆದಿದೆ,’ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಉದ್ಗರಿಸುತ್ತಾರೆ!

ಇದನ್ನೂ ಓದಿ: ‘ತಾಲಿಬಾನ್​​ ಉಗ್ರರಿಗಾಗಿ ಕಾಯುತ್ತಿದ್ದೇನೆ..ಅವರು ಕೊಲ್ಲಲು ಬರುತ್ತಾರೆ‘; ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಅಸಹಾಯಕತೆ​​