‘ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ..ಅವರು ಕೊಲ್ಲಲು ಬರುತ್ತಾರೆ‘; ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಅಸಹಾಯಕತೆ
Taliban: ಈ ಮಧ್ಯೆ ತಾಲಿಬಾನ್ ಉಗ್ರರು ಒಂದು ಭರವಸೆ ನೀಡಿದ್ದಾರೆ. ಹಿಂದಿನ ಅಪ್ಘಾನಿಸ್ತಾನ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ನಮಗೆ ಯಾವುದೇ ದ್ವೇಷವಿಲ್ಲ. ಅವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದೂ ಇಲ್ಲ ಎಂದು ಹೇಳಿದ್ದಾರೆ.
‘ನಾನಿಲ್ಲಿ ಕುಳಿತು ಉಗ್ರರಿಗಾಗಿ (Taliban Terrorists) ಕಾಯುತ್ತಿದ್ದೇನೆ..ಅವರಿಲ್ಲಿ ಬಂದು ಬೇಕಿದ್ದರೆ ನನ್ನನ್ನು ಕೊಲ್ಲಲಿ ಎಂದೇ ಕಾಯುತ್ತಿದ್ದೇನೆ’ ಇದು ಅಪ್ಘಾನಿಸ್ತಾನ (Afghanistan)ದ ಮೊದಲ ಮಹಿಳಾ ಮೇಯರ್ ಜರಿಫಾ ಗಫಾರಿಯವರ ಮಾತು. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ, ಅಧ್ಯಕ್ಷನಾಗಿದ್ದ ಅಶ್ರಫ್ ಘನಿ ಸೇರಿ ಅವರ ಸರ್ಕಾರದ ಹಿರಿಯ ನಾಯಕರೆಲ್ಲ ದೇಶ ತೊರೆದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಜರೀಫಾ, ನಾವೆಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ನಾನು ನನ್ನ ಕುಟುಂಬದೊಂದಿಗೆ ಕುಳಿತು ಉಗ್ರರಿಗಾಗಿ ಕಾಯುತ್ತಿದ್ದೇನೆ. ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಸಹಾಯ ಮಾಡಲು ಯಾರೂ ಇಲ್ಲ. ಖಂಡಿತ ಅವರು ಬಂದನ್ನು ನನ್ನನ್ನು ಕೊಲ್ಲುತ್ತಾರೆ ಎಂದು ಹೇಳಿದ್ದಾರೆ.
ಜರೀಫಾ ಅವರಿಗೆ ಕೇವಲ 27 ವರ್ಷ. ಮೈದಾನ್ ವಾರ್ಡಕ್ ಪ್ರಾಂತ್ಯದ ಮೇಯರ್ ಆಗಿ 2018ರಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಮತ್ತು ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾದವರು. ತಾಲಿಬಾನ್ ಅಪ್ಘಾನಿಸ್ತಾನವನ್ನು ದಾಳಿ ಮಾಡುವುದಕ್ಕೂ ಕೆಲವು ವಾರಗಳ ಮೊದಲು ಅಂತಾರಾಷ್ಟ್ರೀಯ ದೈನಿಕವೊಂದಕ್ಕೆ ಜರೀಫಾ ಸಂದರ್ಶನ ನೀಡಿದ್ದರು. ನಮ್ಮ ದೇಶ ಅಫ್ಘಾನಿಸ್ತಾನಕ್ಕೆ ಉತ್ತಮ ಭವಿಷ್ಯವಿದೆ ಎಂಬ ಆಶಯ ನನಗೆ ಇದೆ ಎಂದು ಅಂದು ಹೇಳಿಕೊಂಡಿದ್ದರು. ಆದರೆ ಭಾನುವಾರದ ಹೊತ್ತಿಗೆ ಅವರ ಎಲ್ಲ ನಿರೀಕ್ಷೆ, ಭರವಸೆಗಳೂ ಹುಸಿಯಾಗಿವೆ. ಆ ನೋವನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೂಡ ತಾಲಿಬಾನ್ ಉಗ್ರರು ಜರೀಫಾ ಗಫಾರಿಯವರಿಗೆ ಪ್ರಾಣ ಬೆದರಿಕೆ ಹಾಕಿದ್ದರು. ಕಳೆದ ವರ್ಷ ನವೆಂಬರ್ 15ರಂದು ಜರೀಫಾ ತಂದೆ ಅಬ್ದುಲ್ಲಾ ವಾಸಿ ಗಫಾರಿಯವರನ್ನು ತಾಲಿಬಾನ್ ಉಗ್ರರು ಗುಂಡಿಟ್ಟು ಕೊಂದಿದ್ದಾರೆ. ಅಷ್ಟರೊಳಗೆ ಜರೀಫಾಳನ್ನು ಹತ್ಯೆ ಮಾಡಲು ಮೂರು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಇದೀಗ ಜರೀಫಾ ಅದೇ ನಿರೀಕ್ಷೆಯಲ್ಲೇ ಇದ್ದಾರೆ. ತಾಲಿಬಾನ್ ಉಗ್ರರು ಇಲ್ಲಿಗೆ ಬಂದು, ನನ್ನನ್ನು ಕೊಲ್ಲುವುದನ್ನೇ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಹಾಗೇ, ಕಳೆದ ಮೂರು ವಾರಗಳ ಹಿಂದೆ ಸುದ್ದಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಜಫೀರಾ, ಅಫ್ಘಾನಿಸ್ತಾನದಲ್ಲಿ ಏನೆಲ್ಲ ಆಗುತ್ತಿದೆ ಎಂಬ ಬಗ್ಗೆ ಇಲ್ಲಿನ ಯುವಜನರಿಗೆ ಅರಿವಿದೆ. ಅವರ ಬಳಿ ಸಾಮಾಜಿಕ ಜಾಲತಾಣಗಳಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಸಂವಹನ ಪ್ರಾರಂಭವಾಗಬೇಕು. ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕು. ಹೀಗಾದಾಗ ಮಾತ್ರ ನಮ್ಮ ದೇಶಕ್ಕೆ ಒಂದು ಸುಂದರ ಭವಿಷ್ಯ ಸಿಗುತ್ತದೆ ಎಂದು ಹೇಳಿದ್ದರು. ಆದರೆ ಅವರಿಂದು ನಿರಾಶರಾಗಿದ್ದಾರೆ. ನನಗೆ ತುಂಬ ಅಸಹಾಯಕಳಾಗಿದ್ದೇ ಎಂಬ ಭಾವ ಮೂಡುತ್ತಿದೆ. ನನ್ನ ಜೀವ ಹೋಗಬಹುದು..ಕುಟುಂಬದ ರಕ್ಷಣೆಯ ಬಗ್ಗೆ ಭಯ ಮೂಡುತ್ತಿದೆ ಎಂದೂ ಜರೀಫಾ ಹೇಳಿಕೊಂಡಿದ್ದಾರೆ.
ನಮಗ್ಯಾವ ಸೇಡಿಲ್ಲ ಈ ಮಧ್ಯೆ ತಾಲಿಬಾನ್ ಉಗ್ರರು ಒಂದು ಭರವಸೆ ನೀಡಿದ್ದಾರೆ. ಹಿಂದಿನ ಅಪ್ಘಾನಿಸ್ತಾನ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ನಮಗೆ ಯಾವುದೇ ದ್ವೇಷವಿಲ್ಲ. ಅವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದೂ ಇಲ್ಲ ಎಂದು ಹೇಳಿದ್ದಾರೆ. ಆದರೆ ಇದೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ನಂತರ ತುಂಬ ಅಭದ್ರತೆ ಇರುವುದು ಮಹಿಳೆಯರಿಗೇ. ತಾಲಿಬಾನಿಗಳ ಷರಿಯಾ ಆಡಳಿತ ಸಹಿಸಿಕೊಳ್ಳುವುದು ತುಂಬ ಕಷ್ಟ. ಮಹಿಳೆಯರಿಗೆ ಅನೇಕ ಕಟ್ಟುಪಾಡುಗಳನ್ನು ಕಡ್ಡಾಯ ಮಾಡುತ್ತಾರೆ. ಅದರಲ್ಲೂ ಜರೀಫಾ ಹತ್ಯೆಗೆ ಈಗಾಗಲೇ ಪ್ರಯತ್ನ ನಡೆದಿದ್ದರಿಂದ, ಸಹಜವಾಗಿಯೇ ಅವರಿಗೆ ಆತಂಕ ಮನೆ ಮಾಡಿದೆ.
ಇದನ್ನೂ ಓದಿ: ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತಾಯಿತು; ತಾಲಿಬಾನ್ ಉಗ್ರರ ಅನಾಗರಿಕ ವರ್ತನೆ ನೋಡಿ
Jasprit Bumrah: ಜಸ್ಪ್ರೀತ್ ಬುಮ್ರಾರ ಮತ್ತೊಂದು ಮುಖ ಬಯಲು: ರೂಟ್ ಔಟಾದಾಗ ಮಾಡಿದ್ದೇನು ನೋಡಿ
Published On - 1:40 pm, Tue, 17 August 21