LPG ಸಿಲಿಂಡರ್ ಬಿಕ್ಕಟ್ಟು: ಕಾಳಸಂತೆಯಲ್ಲಿ ಏಜೆನ್ಸಿಗಳು, ದಂಧೆಕೋರರ ಕಳ್ಳಾಟ, 15 ಸಾವಿರ ಸಿಲಿಂಡರ್ ಜಪ್ತಿ
ಅಮೆರಿಕಾ, ಇಸ್ರೇಲ್, ಇರಾನ್ ಯುದ್ಧದಿಂದ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗಿದೆ. ಕಮರ್ಷಿಯಲ್ ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರು ಪರದಾಡುತ್ತಿದ್ದು, ಕಾಳಸಂತೆಯಲ್ಲಿ ಗೃಹಬಳಕೆ ಸಿಲಿಂಡರ್‌ಗಳ ಮಾರಾಟ ಹೆಚ್ಚಿದೆ. ದೇಶಾದ್ಯಂತ 12 ಸಾವಿರಕ್ಕೂ ಹೆಚ್ಚು ಕಡೆ ದಾಳಿ ನಡೆಸಿ, 15 ಸಾವಿರ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಮತ್ತೊಂದೆಡೆ, ಗ್ಯಾಸ್ ಸಿಲಿಂಡರ್ಗಾಗಿ ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದೆ.
ಬೆಂಗಳೂರು, ನವದೆಹಲಿ, ಮಾರ್ಚ್ 18: ಇರಾನ್-ಇಸ್ರೇಲ್, ಮಧ್ಯಪ್ರಾಚ್ಯ ಸಂಘರ್ಷ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಗ್ಯಾಸ್ ಸಿಲಿಂಡರ್‌ಗಳ ತೀವ್ರತರದ ಅಭಾವಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿಯು ಹೋಟೆಲ್ ಮಾಲೀಕರನ್ನು ದಿಕ್ಕೆಡಿಸಿದ್ದು, ಕಮರ್ಷಿಯಲ್ ಸಿಲಿಂಡರ್‌ಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಿಕ್ಕಟ್ಟನ್ನು ದುರ್ಬಳಕೆ ಮಾಡಿಕೊಂಡ ಕೆಲ ಖದೀಮರು ಗೃಹಬಳಕೆ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಅಕ್ರಮಗಳ ವಿರುದ್ಧ ದೇಶಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ, ದೆಹಲಿ, ಜಮ್ಮು ಕಾಶ್ಮೀರ, ಕೇರಳ ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ಸುಮಾರು 15 ಸಾವಿರ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿಯಲ್ಲಿ 600 ಸಿಲಿಂಡರ್‌ಗಳು, ಉತ್ತರ ಪ್ರದೇಶದಲ್ಲಿ 405 ತಪಾಸಣೆಗಳು ನಡೆದಿವೆ ಹಾಗೂ 10 ಜನರನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 504 ದಾಳಿ ನಡೆಸಿ ಎಫ್‌ಐಆರ್ ದಾಖಲಿಸಲಾಗಿದೆ.
ಕರ್ನಾಟಕದಲ್ಲಿ ಬೀದರ್‌ನಲ್ಲಿ 105, ದಾವಣಗೆರೆ ಮತ್ತು ಯಾದಗಿರಿಯಲ್ಲಿ ತಲಾ 20 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಏತನ್ಮಧ್ಯೆ, ಕಮರ್ಷಿಯಲ್ ಗ್ಯಾಸ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸಮರ್ಪಕ ಗ್ಯಾಸ್ ಪೂರೈಕೆಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದೆ.
