ಭಾರತದಲ್ಲಿ ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅಭಿನಂದನೆ
ಪ್ರಧಾನಿ ಮೋದಿ ದ್ವೀಪಸಮೂಹ ರಾಷ್ಟ್ರಕ್ಕೆ ಎರಡು ದಿನಗಳ ಭೇಟಿಯಲ್ಲಿದ್ದಾರೆ. ಯುಕೆಗೆ ಅವರ ಐತಿಹಾಸಿಕ ಭೇಟಿಯ ನಂತರ ಬರುವ ಅವರ ಭೇಟಿಯು ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ. ಏಕೆಂದರೆ ಮುಯಿಝು 2023ರಲ್ಲಿ 'ಇಂಡಿಯಾ ಔಟ್' ಚುನಾವಣಾ ಪ್ರಚಾರದಲ್ಲಿ ಅಧಿಕಾರಕ್ಕೆ ಬಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಭಾರತದ ಎರಡನೇ ಪ್ರಧಾನಿ ಎನಿಸಿಕೊಂಡಿದ್ದಾರೆ.
ಮಾಲೆ, ಜುಲೈ 25: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಅಭಿನಂದಿಸಿದರು. ನರೇಂದ್ರ ಮೋದಿ ಅವರು ಭಾರತದ ಸತತ ಎರಡನೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಅಧಿಕಾರ ನಡೆಸಿದವರು ಎಂಬ ದಾಖಲೆ ಬರೆದಿದ್ದಾರೆ. ಮಾಲೆಯಲ್ಲಿ ಪ್ರಧಾನಿ ಮೋದಿ ಅವರಿಗಾಗಿ ಆಯೋಜಿಸಲಾದ ಔತಣಕೂಟದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಯಿಝು, ಈ ಗಮನಾರ್ಹ ಮೈಲಿಗಲ್ಲು ಸಾರ್ವಜನಿಕ ಸೇವೆಗೆ ಮೋದಿಯವರ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. “ಇಂದು ಭಾರತದ ಎರಡನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾದ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ 4,078 ದಿನಗಳ ಈ ಗಮನಾರ್ಹ ಮೈಲಿಗಲ್ಲು ಸಾಧಾರಣ ವಿಷಯವಲ್ಲ. ಇದು ಸಾರ್ವಜನಿಕ ಸೇವೆಗೆ ನಿಮ್ಮ ಅಚಲ ಬದ್ಧತೆ ಮತ್ತು ಭಾರತೀಯ ಜನರ ಪ್ರಗತಿ ಮತ್ತು ಸಮೃದ್ಧಿಗೆ ಸಮರ್ಪಣೆಗೆ ಸಾಕ್ಷಿಯಾಗಿದೆ” ಎಂದು ಮಾಲ್ಡೀವ್ಸ್ (Maldives) ಅಧ್ಯಕ್ಷರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಭಾರತದ ಎರಡನೇ ಪ್ರಧಾನಿ ಎನಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಇಂದು (ಶುಕ್ರವಾರ) ಅಧಿಕಾರಾವಧಿಯ 4,078 ದಿನಗಳನ್ನು ಪೂರೈಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜನವರಿ 24, 1966ರಿಂದ ಮಾರ್ಚ್ 24, 1977ರವರೆಗೆ 4,077 ದಿನಗಳ ಕಾಲ ನಿರಂತರ ಅಧಿಕಾರದಲ್ಲಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ