ಮಂಡ್ಯ: ಲಂಚ ಕೊಟ್ಟ ಹಣ ವಾಪಸ್ ಕೊಡುವಂತೆ ಪಿಡಿಒ ಬೆನ್ನುಬಿದ್ದ ಭೂಪ! ವಿಡಿಯೋ ವೈರಲ್
ಮಂಡ್ಯ ಜಿಲ್ಲೆಯ ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೆ.ಆರ್.ಪೇಟೆ ತಾಲೂಕಿನ ಮಂದೆಗೆರೆ ಗ್ರಾಮದಲ್ಲಿ ಪಿಡಿಒ 15 ಸಾವಿರ ರೂ. ಲಂಚ ಪಡೆದು ಕೆಲಸ ಮಾಡಿಲ್ಲ ಎಂದು ಆರೋಪಿಸಿದ ಗ್ರಾ.ಪಂ ಸದಸ್ಯ ನಡುರಸ್ತೆಯಲ್ಲೇ ಪಿಡಿಒ ಅಡ್ಡಗಟ್ಟಿ ಹಣ ವಾಪಸ್ ಕೇಳಿದ್ದಾರೆ.
ಮಂಡ್ಯ, ಆಗಸ್ಟ್ 6: ಲಂಚ ಕೊಟ್ಟ ಹಣವನ್ನು ವಾಪಸ್ ಕೊಡಿ ಎಂದು ವ್ಯಕ್ತಿಯೊಬ್ಬರು ಪಿಡಿಒ ಬೆನ್ನುಬಿದ್ದ ವಿಡಿಯೋ ವೈರಲ್ ಆಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಂದೆಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಉದ್ಯೋಗ ಖಾತ್ರಿ ಬಿಲ್ ಪಾವತಿಗೆ ಗ್ರಾ.ಪಂ ಸದಸ್ಯ ಜಗದೀಶ್ ಎಂಬವರು ಪಿಡಿಒ ಸುವರ್ಣ ಎಂಬವರಿಗೆ 15 ಸಾವಿರ ರೂ. ಲಂಚ ಕೊಟ್ಟಿದ್ದರು ಎನ್ನಲಾಗಿದೆ. ಲಂಚ ಕೊಟ್ಟ ಬಳಿಕವೂ ಕೆಲಸ ಆಗಿಲ್ಲ ಎಂದು ಜಗದೀಶ್ ನಡುರಸ್ತೆಯಲ್ಲಿ ಪಿಡಿಒರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ವಿಡಿಯೋ ಸಹ ರೆಕಾರ್ಡ್ ಮಾಡಿದ್ದಾರೆ. ಮತ್ತೊಂದೆಡೆ, ಹಣಕ್ಕೆ ಬಿಗಿಪಟ್ಟು ಹಿಡಿದ ಸದಸ್ಯ ಕೂಡ ಕಾಮಗಾರಿಯಲ್ಲಿ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಲಂಚ ಪಡೆದ ಆರೋಪವನ್ನು ಪಿಡಿಒ ಸುವರ್ಣ ಅಲ್ಲಗಳೆದಿದ್ದಾರೆ.